ಸಮೀಕ್ಷೆಯಲ್ಲಿ ಸಮುದಾಯದವರು ತಪ್ಪದೇ ಭಾಗವಹಿಸಿ

The community must participate in the survey.
ಮಂಜುನಾಥ ಭಾರತೀ ಸ್ವಾಮಿಜಿ
Published on

ಹಳಿಯಾಳ: ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರಲ್ಲಿ ಮರಾಠಾ ಸಮುದಾಯದವರು ಧರ್ಮ ಹಿಂದು, ಜಾತಿ ಮರಾಠಾ ಮತ್ತು ಉಪಜಾತಿಯನ್ನು ಕುಣಬಿ ಎಂದು ನಮೂದಿಸುವಂತೆ ಬೆಂಗಳೂರಿನ ಗೋಸಾಯಿ ಮಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಮಂಜುನಾಥ ಭಾರತೀ ಸ್ವಾಮಿಜಿ ಕರೆ ನೀಡಿದ್ದಾರೆ.

ಈ ಕುರಿತು ಮಂಗಳವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿ ನಡೆಯಲಿರುವ ಜಾತಿ ಜನಗಣತಿ ಸಮೀಕ್ಷೆಯ ಬಗ್ಗೆ ಮರಾಠಾ ಸಮುದಾಯದ ವತಿಯಿಂದ ಬೆಂಗಳೂರಿನಲ್ಲಿ ಮಹತ್ವಪೂರ್ಣ ಸಭೆಯನ್ನು ನಡೆಸಲಾಗಿದ್ದು, ಕರ್ನಾಟಕದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳ ಕುರಿತು ವಿವಿಧ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾದರಿ ನಮೂನೆ ಫಾರಂನಲ್ಲಿ ಇರುವ ಕ್ರಮ ಸಂಖ್ಯೆಗಳ ಮುಂದೆ ಈ ರೀತಿಯಾಗಿ ನಮೂದಿಸಲು ಸಭೆಯಲ್ಲಿ ಮರಾಠಾ ಸಮಾಜದ ಪ್ರಮುಖರು ನಿರ್ಣಯಿಸಿದಂತೆ ಕಾಲಂ ನಂಬರ್ 08 ಧರ್ಮ 1. ಹಿಂದೂ, 09 ರಲ್ಲಿ ಜಾತಿ 839 ಮರಾಠಾ, 10ರಲ್ಲಿ ಉಪಜಾತಿ 720 ಕುಣಬಿ ಮತ್ತು 15 ರಲ್ಲಿ 6 ಮರಾಠಿ ಎಂದೂ ನಮೂದಿಸುವಂತೆ ಶ್ರೀಗಳು ಕರೆ ನೀಡಿದ್ದಾರೆ.

ರಾಜ್ಯದಲ್ಲಿ ನಮ್ಮ ಮರಾಠಾ ಸಮುದಾಯದ ಜನಸಂಖ್ಯೆ 40 ಲಕ್ಷಕ್ಕಿಂತ ಹೆಚ್ಚಿದೆ. ಆದರೇ, ಸರ್ಕಾರ 16 ಲಕ್ಷ ಇದೆ ಎಂದು ಹೇಳಿದೆ. ಹೀಗಾಗಿ ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ಸರ್ಕಾರಕ್ಕೆ ತಿಳಿಸಲು ಸಮುದಾಯದ ಪ್ರತಿಯೊಬ್ಬರು ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಇದರಿಂದ ಮರಾಠ ಸಮುದಾಯ ಪ್ರವರ್ಗ 3ಬಿಯಿಂದ 2 ಎ ಗೆ ಸೇರಿಸಲು ಅನುಕೂಲವಾಗಲಿದೆ. ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮಿಜಿ ಮರಾಠಾ ಜಗದ್ಗುರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net