

ಯಳಂದೂರು: ಮೂಲಸೌಲಭ್ಯಗಳಲ್ಲಿ ಒಂದಾದ ಶೌಚಗೃಹ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಸಮಪರ್ಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ಶೌಚಕ್ಕೆ ಬಯಲನ್ನೇ ಅವಲಂಬಿಸಬೇಕಾಗಿದ್ದು, ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಗಮನಹರಿಸದಿರುವುದು ದೊಡ್ಡ ದುರಂತವಾಗಿದೆ.
ತಾಲೂಕಿನ ಯರಿಯೂರು ಗ್ರಾಮ ಹೊರವಲಯದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಗೃಹಗಳು ಜನರಿಗೆ ಬಳಕೆಗೆ ಬಾರದೆ ಗಿಡಗಂಟಿಗಳು ಬೆಳೆದುಕೊಂಡು ನಿರುಪಯುಕ್ತವಾಗಿವೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಲೆಕಡಿಸಿಕೊಳ್ಳದೆ ಇರುವುದು ದೊಡ್ಡ ದುರಂತವಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರದಸ್ಥಾನದ ಹೊರವಲಯದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ 2019-20ನೇ ಸಾಲಿನ ಸಮುದಾಯ ಶೌಚಗೃಹಗಳನ್ನು ನಿರ್ಮಿಸಿ 2 ವರ್ಷಗಳೇ ಕಳೆದರೂ ಬಳಕೆಯಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷೃ ವಹಿಸಿರುವುದರಿಂದ ಜಾಲಿಗಿಡಗಳು ಕಟ್ಟಡವನ್ನು ಆಶ್ರಯಿಸುವಂತಾಗಿದೆ. ಗಿಡಗಂಟಿಗಳು ಕಟ್ಟಡದೆತ್ತರಕ್ಕೆ ಬೆಳೆದಿದ್ದು, ಶೌಚಗೃಹ ಕಾಣದಂತಾಗಿದೆ. ಇದರಿಂದ ಗ್ರಾಮದ ಮಹಿಳೆಯರು ಶೌಚಕ್ಕೆ ಬಯಲು ಪ್ರದೇಶವನ್ನೇ ಅವಲಂಬಿಸಬೇಕಾಗಿದೆ. ಮಳೆಗಾಲದಲ್ಲಂತೂ ಶೌಚಕ್ಕೆ ಹೋಗಲು ನರಕಯಾತನೆ ಅನುಭವಿಸಬೇಕಾಗಿದೆ. ಉಳ್ಳವರು ಮನೆಯಲ್ಲಿ ಶೌಚಗೃಹ ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ ಬಹುತೇಕರಿಗೆ ಸರ್ಕಾರ ನೆರವು ನೀಡಿದರೂ ಶೌಚಗೃಹ ನಿರ್ಮಾಣ ಮಾಡಿಕೊಳ್ಳಲು ಸ್ಥಳವಿಲ್ಲ. ಹೀಗಾಗಿ ಕೂಡಲೇ ಸಾರ್ವಜನಿಕ ಶೌಚಗೃಹವನ್ನು ಜನರು ಉಪಯೋಗಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಬೇಕಾಗಿದೆ.
ಬಯಲು ಬಹಿರ್ದೆಸೆಯೇ ಹೆಚ್ಚು
ತಾಲೂಕಿನ ಯರಿಯೂರು ಗ್ರಾಮದಲ್ಲಿ ಬಹುತೇಕ ಮನೆಗಳು ಚಿಕ್ಕದಾಗಿರುವ ಹಿನ್ನೆಲೆಯಲ್ಲಿ ಶೌಚಗೃಹವನ್ನು ನಿರ್ಮಿಸಿಲ್ಲ. ಅಲ್ಲದೆ, ಸಾಮೂಹಿಕ ಶೌಚಗೃಹಗಳಿಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಪಕ್ಕದಲ್ಲಿರುವ ಸುವರ್ಣಾವತಿ ನದಿ, ಕೆರೆ-ಕಟ್ಟೆಯಲ್ಲಿ ನೀರು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಯಲು ಬಹಿರ್ದೆಸೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದರಿಂದ ರೋಗರುಜಿನಗಳು ಹರಡುವ ಭೀತಿಯ ಜತೆಗೆ, ರಸ್ತೆ ಬದಿಯಲ್ಲಿ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಶೌಚಗೃಹಗಳ ಬೀಗ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರೆ ನಿರ್ವಹಣೆ ಮಾಡಬೇಕಾಗುತ್ತದೆ. ನೀರು, ಸ್ವಚ್ಛತೆ, ಪೌರ ಕಾರ್ಮಿಕರ ನಿಯೋಜನೆಯನ್ನು ಪಂಚಾಯಿತಿಯಿಂದಲೇ ಮಾಡಬೇಕಾಗುತ್ತದೆ. ಇದನ್ನು ತಿಳಿದ ಪಂಚಾಯಿತಿ ಇದಕ್ಕೆ ಬೀಗ ಹಾಕಿದೆ. ಹೀಗಾಗಿ ಕಳೆದ 2 ವರ್ಷಗಳಿಂದಲ್ಲೂ ಶೌಚಗೃಹ ಉಪಯೋಗಕ್ಕೆ ಬಾರದಂತಾಗಿದೆ.