

ಗುಂಡ್ಲುಪೇಟೆ: ಬಂಡೀಪುರಕ್ಕೆ ಎರಡು ದಿನಗಳ ಕಾಲ ಪ್ರವಾಸ ಬಂದಿದ್ದ ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯ ಸದಸ್ಯರು ಶುಕ್ರವಾರ ಬೆಂಗಳೂರಿಗೆ ವಾಪಸಾದರು.
ಗುರುವಾರ ಬಂಡೀಪುರ ಹೊರವಲಯದ ಮೇಲುಕಾಮನಹಳ್ಳಿಯಲ್ಲಿರುವ ಜಂಗಲ್ ರೆಸಾರ್ಟ್ಸ್‌ಗೆ ಭೇಟಿ ನೀಡಿದ ಸಮಿತಿಯ ಸದಸ್ಯರನ್ನು ತಹಸೀಲ್ದಾರ್ ಟಿ.ರಮೇಶ್‌ಬಾಬು ಶಿಷ್ಟಾಚಾರದಂತೆ ಸ್ವಾಗತಿಸಿದರು.
ಸಮಿತಿ ಸದಸ್ಯರಾದ ಅರಗ ಜ್ಞಾನೇಂದ್ರ, ಐವಾನ್ ಡಿಸೋಜಾ, ಸಿ.ಪುಟ್ಟರಂಗಶೆಟ್ಟಿ, ಬಿ.ಜಿ.ಪಾಟೀಲ, ಉಮಾಶ್ರೀ, ಭಾರತಿ ಶೆಟ್ಟಿ ರೆಸಾರ್ಟ್‌ನಲ್ಲಿ ಸಭೆ ನಡೆಸಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.
ಗುರುವಾರ ಸಂಜೆ ಮತ್ತು ಶುಕ್ರವಾರ ಬೆಳಗ್ಗೆ ಬಂಡೀಪುರ ಅರಣ್ಯದೊಳಗೆ ಸಫಾರಿಗೆ ತೆರಳಿ ಕಾಟಿ, ಆನೆ, ಚುಕ್ಕೆಜಿಂಕೆಗಳು ಮುಂತಾದ ವನ್ಯಜೀವಿಗಳ ದರ್ಶನ ಪಡೆದರು. ಇವರೊಂದಿಗೆ ಸಫಾರಿ ವಾಹನಗಳ ಚಾಲಕರಾದ ರಮೇಶ, ಬೊಮ್ಮ, ಕಿರಣ್ ನ್ಯಾಚುರಾಲಿಸ್ಟ್‌ಗಳಾದ ಕಿಶೋರ ಹಾಗೂ ಬಸವಣ್ಣ ತೆರಳಿದ್ದರು ಎಂದು ಜೆಎಲ್‌ಆರ್ ಸಂಸ್ಥೆಯ ಪಂಪಾಪತಿ ವಿಜಯವಾಣಿಗೆ ತಿಳಿಸಿದ್ದಾರೆ.