ಜನಸಾಮಾನ್ಯರ ಸಂಕಷ್ಟ ಕೇಳಲು ಅಸ್ತಿತ್ವಕ್ಕೆ ಬಂದ ಸಮಿತಿ

01-Arun Kumar.
Published on
  • ಮಡಿಕೇರಿ: ತಾಲೂಕಿನ ಅಭಿವೃದ್ಧಿಗಾಗಿ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್‌ಕುಮಾರ್ ಹೇಳಿದರು.

  • ಸೋಮವಾರಪೇಟೆಯ ಸಮಾನ ಮನಸ್ಕರು ಒಂದುಗೂಡಿ ರಾಜಕೀಯ ರಹಿತವಾಗಿ ಅಭಿವೃದ್ಧಿ ಪರ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

  • ಜನಸಾಮಾನ್ಯರು ಹಾಗೂ ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೂಲಕ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯುವಕರನ್ನು ಸಂಘಟಿಸಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಾಗುವುದು. ಯುವ ನಾಯಕತ್ವಕ್ಕೆ ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು ಎಂದರು.

  • ವಿವಿಧ ಸರ್ಕಾರಿ ಇಲಾಖೆಗಳಲ್ಲಿ ರೈತರು ಹಾಗೂ ಬಡವರಿಗೆ ಶೋಷಣೆಯಾಗದಂತೆ ನೋಡಿಕೊಳ್ಳಲಾಗುವುದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳುವ ಕೆಲಸವನ್ನು ಸಮಿತಿ ಸದಸ್ಯರು ಮಾಡುತ್ತಾರೆ ಎಂದರು.

  • ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ, ತಾಲೂಕು ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ನಡೆಸುವುದು. ಕೃಷಿ ಪ್ರಧಾನ ಗ್ರಾಮಗಳಲ್ಲಿ ಕೃಷಿ ಬೆಳೆಗಳ ಬಗ್ಗೆ ವಿಶೇಷ ಶಿಬಿರಗಳನ್ನು ಏರ್ಪಡಿಸಲಾಗುವುದು. ಸರ್ಕಾರದಿಂದ ನಿರ್ಮಾಣವಾಗುವ ಕಾಮಗಾರಿಗಳ ಬಗ್ಗೆ ಎಚ್ಚರ ವಹಿಸಿ, ಕಳಪೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಸಮಿತಿ ಮಾಡಲಿದೆ. ಯುವಜನರಲ್ಲಿ ಸ್ವ ಉದ್ಯೋಗದಂತಹ ಸ್ವಾವಲಂಬಿ ವೃತ್ತಿಯನ್ನು ಕೈಗೊಳ್ಳಲು ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

  • ಇವತ್ತಿಗೂ ತಾಲೂಕಿನ ಅನೇಕ ಗ್ರಾಮಗಳಿಗೆ ಮೂಲ ಸೌಕರ್ಯಗಳು ತಲುಪಬೇಕಾಗಿದೆ. ರಸ್ತೆ, ಚರಂಡಿ, ಸೇತುವೆ ನಿರ್ಮಾಣವಾಗಬೇಕು. ಕೆಲ ಗ್ರಾಮಗಳಿಗೆ ಇವತ್ತಿಗೂ ಬಸ್ ಸಂಚಾರ ಸೌಲಭ್ಯವಿಲ್ಲ. ಮೊದಲು ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

  • ಸಮಿತಿ ಮನವಿಯ ಮೇರೆಗೆ ಶಾಸಕ ಡಾ.ಮಂತರ್‌ಗೌಡ ಹೆಚ್ಚಿನ ಆಸಕ್ತಿ ವಹಿಸಿ ಸೋಮವಾರಪೇಟೆ ತಾಲೂಕಿನ ಕುಡಿಗಾಣ-ಕೊತ್ನಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪುಷ್ಪಗಿರಿ ತಪ್ಪಲಿನ ಗ್ರಾಮಗಳಿಗೆ ಬಸ್ ಹೋಗುತ್ತಿದೆ. ರೈತರು ಮತ್ತು ವಿದ್ಯಾರ್ಥಿಗಳು ಸಂತೋಷಗೊಂಡಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net