ಸಮಸ್ಯೆಗೆ ಧ್ವನಿಯಾಗುವ ಬದ್ಧತೆ ಕಣ್ಮರೆ

FotoJet (1)
Published on

ಕೋಲಾರ: ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಜನರಿಗೆ ಆಕ್ರೋಶವಿದ್ದರೂ ಅವುಗಳನ್ನು ಬಳಸಿಕೊಂಡು ಹೋರಾಟ ರೂಪಿಸಲು ಜನಪ್ರತಿನಿಧಿಗಳು ಸೇರಿ ಸಂಘ&ಸಂಸ್ಥೆಗಳು ವಿಫಲವಾಗಿವೆ ಎಂದು ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ಕುಮಾರ್​ ಬೇಸರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸಿಪಿಐಎಂ ಜಿಲ್ಲಾ ಸಮಿತಿಯಿಂದ ರೈತ ಮುಖಂಡ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜನರ ಆಕ್ರೋಶದ ನೈಜತೆಯ ಬಗ್ಗೆ ಯಾವುದೇ ವ್ಯಕ್ತಿಯಾಗಲಿ, ಪಕ್ಷವಾಗಲಿ ಸಹಾಯ ಮಾಡಲು ಮುಂದಾಗುತ್ತಿಲ್ಲ. ಜನತೆಯ ಅಸಹಾಯಕತೆ ತಣ್ಣಗಾಗಿಸುವ ನೈಪುಣ್ಯ ಗೊತ್ತಿದ್ದರೂ ಮುಂದಾಗುವವರ ಸಂಖ್ಯೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಮ್ಯೂನಿಸ್ಟ್​ ಚಳವಳಿಯ ಕಟ್ಟಾಳುಗಳು ನಿರಂತರವಾಗಿ ಅಧ್ಯಯನಶೀಲರಾಗಿರುತ್ತಾರೆ. ಅದರಿಂದಲೇ ಅವರು ಮಾತಾಡುವ ಶೈಲಿ ವಿಭಿನ್ನವಾಗಿರುತ್ತದೆ. ಪ್ರತಿಯೊಂದು ಹಂತದಲ್ಲೂ ಜನಪರವಾದ ವಿಚಾರ ಮೈಗೂಡಿಸಿಕೊಂಡಿರುತ್ತಾರೆ. ಇವತ್ತಿನ ಕಲುಷಿತ ವಾತಾವರಣದ ರಾಜಕೀಯ ವ್ಯವಸ್ಥೆಯಲ್ಲಿ ನೈಜತೆಯ ರಾಜಕಾರಣ ಮುಖ್ಯವಾಗಿದೆ. ಜನಪರ ಹೋರಾಟಕ್ಕೆ ಜಯ ಸಿಗುತ್ತದೆ. ನಿಮ್ಮ ಜನಮುಖಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುತ್ತದೆ ಎಂದರು.

ವಿಧಾನ ಪರಿಷತ್​ ಮಾಜಿ ಸಭಾಪತಿ ವಿ.ಆರ್​ ಸುದರ್ಶನ್​ ಮಾತನಾಡಿ, ಕಮ್ಯೂನಿಸ್ಟ್​ ಚಳವಳಿಗಳೇ ಜಿಲ್ಲೆಯ ಜನಪರ ಯೋಜನೆಗಳ ಜತೆಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಕಾರಣವಾಗಿವೆ. ಬೆಲೆ ಏರಿಕೆ, ಭೂಸ್ವಾಧಿನ ವಿರುದ್ದ ಕೋಮುವಾದಿ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ಕಮ್ಯೂನಿಸ್ಟ್​ ಪಕ್ಷ ನಿರಂತರ ಹೋರಾಟ ರೂಪಿಸಿದೆ. ದೇಶದಲ್ಲಿ ಜನತಾ ಪರಿಹಾರದ ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ಕೆಲವು ಕಡೆ ರಾಜಕಾರಣದಿಂದ ದೂರವಾಗಿವೆ. ಇದರಿಂದ ಬಿಜೆಪಿಗೆ ಲಾಭವಾಗಿದೆ. ಕಮ್ಯೂನಿಸ್ಟ್​ ಇತಿಹಾಸ ತಿಳಿದು ಜನರನ್ನು ಎಚ್ಚರಿಸುವ ಮೂಲಕ ಉತ್ತಮ ಸಮಾಜದ ನಿಮಾರ್ಣ ಮಾಡಬೇಕು ಎಂದರು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ.ಕೆ ಪ್ರಕಾಶ್​ ಮಾತನಾಡಿ, ದೇಶದಲ್ಲಿ ಕಮ್ಯೂನಿಸ್ಟ್​ ಪಕ್ಷದ ಕಾರ್ಯಕರ್ತರು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಸಂಯುಕ್ತರಂಗದ ತಂತ್ರಗಾರಿಕೆಯಿಲ್ಲದೇ ಚಳವಳಿಗೂ ನಷ್ಟವಾಗಿದೆ. ಬಯ್ಯಾರೆಡ್ಡಿ ಅಂತಹ ನಾಯಕ ಜಾತಿ, ಧರ್ಮ, ಪಕ್ಷ ಬಿಟ್ಟು ಸಮಾಜದ ಹಕ್ಕುಗಳಿಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.

ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ರೈತ ಪರವಾದ ಹೋರಾಟಗಳು ಜಿಲ್ಲೆಯಿಂದ ಪ್ರಾರಂಭವಾಗಿ ಯಶಸ್ಸು ಗಳಿಸಲು ಸಾಧ್ಯವಾಗಿದೆ. ಅದಕ್ಕಾಗಿ ತ್ಯಾಗ ಮಾಡಿದವರ ನೆನಪು, ಬದುಕಿನ ದಾರಿ ನಮಗೆಲ್ಲ ಸ್ಫೂರ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಕೊಡಿಸುವ ಚಳವಳಿ ಇವತ್ತಿನ ಸಂದರ್ಭದಲ್ಲಿ ಅವಶ್ಯ ಇದೆ ಎಂದರು. ಬಯ್ಯಾರೆಡ್ಡಿ ಅವರ ಮಗಳು ನಿಲೋನಾ ಇದ್ದರು.

ಜಿಲ್ಲೆಗೆ ತುಂಬಲಾರದ ನಷ್ಟ

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಮತ್ತು ಜಿ.ಸಿ ಬಯ್ಯಾರೆಡ್ಡಿ ಆಡಳಿತ ಪಕ್ಷಗಳಿಗೆ ನಿರಂತರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಮಹಿಳೆಯ, ಕಾರ್ಮಿಕರ, ರೈತರ ವಿಧ್ಯಾರ್ಥಿಗಳ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಂತಹವರು ನಮ್ಮಿಂದ ದೂರವಾಗಿದ್ದರಿಂದ ಚಳುವಳಿಗೆ ಹಾಗೂ ಜಿಲ್ಲೆಗೆ ತುಂಬುಲಾರದ ನಷ್ಟವಾಗಿದೆ. ಅವರ ಆದರ್ಶಗಳು ನಮಗೆಲ್ಲ ಸ್ಪೂರ್ತಿಯಾಗಬೇಕು ಎಂದು ಎಂಎಲ್ಸಿ ಎಂ.ಎಲ್​ ಅನಿಲ್​ ಕುಮಾರ್​ ತಿಳಿಸಿದರು.

25 ಪೈಸೆ ತೆರಿಗೆಗೆ ಪ್ರತಿಭಟನೆ!: ಸುಮಾರು 60 ರ ದಶಕದಲ್ಲಿ ಬೆಂಗಳೂರಿನಲ್ಲಿ ಸೈಕಲ್​ಗೆ 25 ಪೈಸೆ ತೆರಿಗೆ ಹಾಕಿದಾಗ ಎಲ್ಲ ರಾಜಕೀಯ ಪಕ್ಷಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇವತ್ತು ಜನರ ಸೇವೆ ಹೆಸರಿನಲ್ಲಿ ದರೋಡೆ ಮಾಡುವವರ ವಿರುದ್ಧ ಯಾವುದೇ ಆಕ್ರೋಶದ ಧ್ವನಿಯಿಲ್ಲವಾಗಿದೆ ಎಂದು ರಮೇಶ್​ಕುಮಾರ್​ ಬೇಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net