ವಿಮಾ ಕಂಪನಿಗೆ ದಂಡ ವಿಧಿಸಿದ ಆಯೋಗ

law-4617873_1920
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಪಘಾತವಾದ ವಾಹನ ದುರಸ್ತಿಗೆ ವಿಮೆ ಕಂಪನಿ ಕ್ಲೇಮ್ ನೀಡದ ಹಿನ್ನೆಲೆಯಲ್ಲಿ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ಗದಗ ಜಿಲ್ಲೆ ನರಗುಂದದ ಸುನೀಲ ದೋಂಗಡಿ ಎಂಬುವವರ ಬೊಲೆರೋ ಪಿಕ್‌ಅಪ್ ವಾಹನಕ್ಕೆ ಹುಬ್ಬಳ್ಳಿಯಲ್ಲಿನ ಎಚ್‌ಡಿಎಫ್‌ಸಿ ಇರಗೋ ಜನರಲ್ ಇನ್ಸುರೆನ್ಸ್ ಕಂಪನಿಯಲ್ಲಿ ವಿಮೆ ಮಾಡಿಸಲಾಗಿತ್ತು. 2019ರ ಸೆ. 27ರಂದು ಸಂಭವಿಸಿದ ಅಪಘಾತದಲ್ಲಿ ವಾಹನ ಜಖಂಗೊಂಡಿತ್ತು. ವಾಹನ ದುರಸ್ತಿಗೆ 2,04,967 ರೂ. ವೆಚ್ಚ ತಗುಲಿದೆ ಎಂದು ಅಧಿಕೃತ ಸರ್ವಿಸ್ ಸೆಂಟರ್‌ನಿಂದ ಅಂದಾಜು ಪಡೆದು ಆ ಮೊತ್ತ ಪರಿಹಾರವಾಗಿ ನೀಡುವಂತೆ ವಿಮಾ ಕಂಪನಿಗೆ ದಾಖಲೆ ಸಮೇತ ಕೋರಿದ್ದರು.
ಆದರೆ ಅಪಘಾತ ಸಮಯದಲ್ಲಿ ವಾಹನಕ್ಕೆ ಫಿಟ್ನೆಸ್ ಪ್ರಮಾಣಪತ್ರ ಇಲ್ಲ ಎಂಬ ಕಾರಣ ನೀಡಿ ವಿಮಾ ಕಂಪನಿಯು ಕ್ಲೇಮ್ ಅರ್ಜಿ ತಿರಸ್ಕರಿಸಿತ್ತು. ಬಳಿಕ ಫಿಟ್ನೆಸ್ ಪ್ರಮಾಣಪತ್ರ ನೀಡಿದರೂ ಕ್ಲೇಮ್‌ಗೆ ಒಪ್ಪಲಿಲ್ಲ. ಹೀಗಾಗಿ 2023ರ ಮಾ. 7ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ವಾಹನದ ವಿಮೆ ಚಾಲ್ತಿಯಲ್ಲಿದ್ದಾಗಲೇ ಅಪಘಾತ ಸಂಭವಿಸಿದ್ದು, ವಾಹನ ದುರಸ್ತಿಗೆ 2,04,967 ರೂ. ಖರ್ಚಾಗಿದೆ. ಬಳಿಕ ಗದಗ ಆರ್‌ಟಿಒ ಕಚೇರಿಯಿಂದ ಅರ್ಹತಾ ಪತ್ರ ನವೀಕರಿಸಿದ್ದರಿಂದ ಕರ್ನಾಟಕ ಹೈ ಕೋರ್ಟ್ ತೀರ್ಪಿನ ಅನ್ವಯ ಅಪಘಾತ ಕಾಲಕ್ಕೆ ವಾಹನಕ್ಕೆ ಅರ್ಹತಾ ಪತ್ರ ಇತ್ತು ಎಂದು ಪರಿಗಣಿಸಿ ವಾಹನ ದುರಸ್ತಿಗೆ ತಗುಲಿದ ವೆಚ್ಚ ನೀಡುವುದು ವಿಮಾ ಕಂಪನಿ ಕರ್ತವ್ಯ. ಆದರೆ ಕಂಪನಿ ಹಣ ನೀಡಲು ನಿರಾಕರಿಸಿದ್ದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಆಯೋಗ, ವಾಹನ ದುರಸ್ತಿ ವೆಚ್ಚ 2,05,000 ರೂ. ಹಾಗೂ ಕ್ಲೇಮ್ ತಿರಸ್ಕರಿಸಿದ ದಿನದಿಂದ ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳಲ್ಲಿ ಹಣ ಸಂದಾಯ ಮಾಡಬೇಕು. ಇದಲ್ಲದೆ ದೂರುದಾರರಿಗೆ ಆಗಿರುವ ಅನನುಕೂಲ ಹಾಗೂ ಮಾನಸಿಕ ತೊಂದರೆಗೆ 25,000 ರೂ. ಪರಿಹಾರ, ಪ್ರಕರಣದ ವೆಚ್ಚ ಎಂದು 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net