

ರಾಯಚೂರು ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ರಾತ್ರಿ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ರಸ್ತೆಗಳಲ್ಲಿ ಅಡಿಗಟ್ಟಲೆ ನೀರು ನಿಂತಿದ್ದರಿಂದ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ಸಂಜೆ 7ಗಂಟೆಗೆ ಆರಂಭಗೊಂಡ ವರುಣನ ಆರ್ಭಟವು ರಾತ್ರಿ 10ರವರೆಗೆ ಮುಂದುವರಿಯಿತು. ದಿಢೀರ್ ಸುರಿದ ಮಳೆಯಿಂದಾಗಿ ನಗರದ ನೀರಾಭಾವಿಕುಂಟ,ಸಿಯಾತಲಾಬ್,ಮಂತ್ರಾಲಯ ರಸ್ತೆ, ಚಂದ್ರಮಾಳೇಶ್ವರ ವೃತ್ತ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲ ರಸ್ತೆಗಳು ಮತ್ತು ರೈಲ್ವೆ ಅಂಡರ್‌ಪಾಸ್‌ನಲ್ಲಿ ಅಡಿಗಟ್ಟಲೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ತಗ್ಗು ಪ್ರದೇಶದ ಮನೆಗಳಿಗೆ ನೀರು ಹೊಕ್ಕಿದೆ. ಕೆಲವಡೆ ಖಾಲಿ ನಿವೇಶನಗಳಿದ್ದು, ಸರಿಯಾದ ರಸ್ತೆ, ಚರಂಡಿ ನಿರ್ಮಿಸಿಲ್ಲ. ಪರಿಣಾಮ ಅಲ್ಲೊಂದು, ಇಲ್ಲೊಂದು ಮನೆ ಕಟ್ಟಿಕೊಂಡವರು ಮನೆಗೆ ಹೋಗಲು ಸಂಪರ್ಕ ಇಲ್ಲದಂತಾಗಿದೆ. ಕೆಲ ಮನೆಗಳ ಸುತ್ತ ಜಲದಿಗ್ಬಂಧನ ಹಾಕಿದಂತಾಗಿದೆ.
ಮಳೆಯಿಂದಾಗಿ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗುವ ಹಿನ್ನೆಲೆಯಲ್ಲಿ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಗುಡುಗು ಸಹಿತ ಮಳೆಯಾಗುತ್ತಿದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡ ಕ್ರಮದಿಂದ ಅನೇಕ ಪ್ರದೇಶಗಳಲ್ಲಿ ನಿವಾಸಿಗಳು ಕತ್ತಲೆಯಲ್ಲಿ ಕಾಲ ಕಳೆದರು.