

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರು ಗ್ರಾಮದ ಸಮೀಪದಲ್ಲಿನ ಕಿರುಸೇತುವೆ ಮಳೆಯಿಂದ ಕುಸಿದಿದ್ದು, ಈ ಮಾರ್ಗದ ಬಸ್ ಸಂಚಾರ ಸ್ಥಗಿತಗೊಂಡು ಜನರು ಪರದಾಡುವಂತಾಗಿದೆ.
15ರಿಂದ 20 ದಿನಗಳ ಹಿಂದೆಯೇ ಸೂರಣಗಿಯಿಂದ ಬಾಲೆಹೊಸೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆದ ಸೇತುವೆಯು ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಪಿಡಬ್ಲೃಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಕಿರು ಸೇತುವೆ ಸಂಪೂರ್ಣ ಕುಸಿದು ವಾಹನ ಸಂಚಾರ ವ್ಯತ್ಯಯವಾಗಿದೆ. ಈ ದಾರಿಯಲ್ಲಿ ಬೈಕ್ ಮಾತ್ರ ಸಾಗಬಹುದಾಗಿದ್ದು, 4 ಚಕ್ರದ ವಾಹನ, ಚಕ್ಕಡಿ ಹಾದು ಹೋಗುವುದಿಲ್ಲ. ಇದರಿಂದ ಜನತೆ, ರೈತರು ಪರದಾಡುವಂತಾಗಿದೆ.
ಬಾಲೆಹೊಸೂರು, ಹಾಲಗಿ, ಮರೂಳ, ನೆಗಳೂರ, ಕೆರೆಕೊಪ್ಪ, ಮಾದಾಪುರ, ಮರಡೂರ ಸೇರಿ ಹಲವು ಗ್ರಾಮಗಳ ಜನರಿಗೆ ಸಮಸ್ಯೆಯಾಗಿದೆ. ಈ ಗ್ರಾಮಗಳವರು ನಿತ್ಯ ವ್ಯಾಪಾರ-ವಹಿವಾಟು, ಶಿಕ್ಷಣದ ಉದ್ದೇಶಕ್ಕಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಾರೆ. ಬಸ್ ಸಂಚಾರ ಸ್ಥಗಿತದಿಂದ ಸುತ್ತುವರಿದು ಸಂಚರಿಸುವಂತಾಗಿದೆ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಹೆಚ್ಚು ತೊಂದರೆ ಆಗಿದೆ. ಬೇರೆ ಊರಿಗೆ ಹೋಗುವವರನ್ನು ಸೂರಣಗಿಯಿಂದ ಬೈಕ್ ಮೂಲಕ ಕರೆದುಕೊಂಡು ಹೋಗಬೇಕಾಗಿದೆ ಎಂದು ಗ್ರಾಮದ ಸಿ.ಎಫ್. ಹಿರೇಮಠ ‘ವಿಜಯವಾಣಿ’ಗೆ ತಿಳಿದರು.
ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆ ಮಾರ್ಗದ ಕಿರು ಸೇತುವೆಗಳ ಮೇಲಿನ ಸಂಚಾರ ಅಪಾಯಕಾರಿಯಾಗಿದೆ. ತೀವ್ರ ಸಮಸ್ಯೆ ಇರುವ ಬಾಲೆಹೊಸೂರು ಮತ್ತು ಬಡ್ನಿ ಮಾರ್ಗದ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೇತುವೆ ದುರಸ್ತಿಯಾದ ಕೂಡಲೇ ಬಸ್ ಸಂಚಾರ ಪ್ರಾರಂಭಿಸಲಾಗುವುದು.-ಸವಿತಾ ಆದಿ, ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕಿ ಅನುದಾನದ ಕೊರತೆಯಿಂದ ಸೇತುವೆಗಳ ತಾತ್ಕಾಲಿಕ ದುರಸ್ತಿ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಕ್ರಿಯಾಯೋಜನೆ ಸಿದ್ದಪಡಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅನುದಾನ ಮಂಜೂರಾದ ಬಳಿಕ ಕಾಮಗಾರಿ ಕೈಗೊಳ್ಳಲಾಗುವುದು.-ಫಕೀರೇಶ ತಿಮ್ಮಾಪುರ, ಲೋಕೋಪಯೋಗಿ ಇಲಾಖೆ ಎಇಇ