

ನೆಲಮಂಗಲ: ಔಷಧ ಅಂಗಡಿಯಲ್ಲಿ ಖರೀದಿ ಮಾಡಿದ್ದ ಗ್ಲೂಕೋಸ್ ಪುಡಿಯಲ್ಲಿ ಜಿರಲೆ ಅಂಗಾಂಗ ಮತ್ತು ಹುಳು ಪತ್ತೆಯಾಗಿದ್ದು, ಔಷಧ ಅಂಗಡಿ ಮತ್ತು ತಯಾರಿಕಾ ಕಂಪನಿ ವಿರುದ್ಧ ಗ್ರಾಹಕರೊಬ್ಬರು ತಾಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.
ತಾಲೂಕಿನ ಅರಿಶಿನಕುಂಟೆ ಗ್ರಾಮದ ನಿವಾಸಿ ಗೋವಿಂದರಾಜು ಪತ್ನಿಗೆ ನಿಶ್ಯಕ್ತಿಯಾಗಿದ್ದರಿಂದ ಪಟ್ಟಣದ ಚನ್ನಪ್ಪ ಬಡಾವಣೆಯ ಔಷಧ ಅಂಗಡಿಯಲ್ಲಿ 50 ಗ್ರಾಂ ತೂಕದ ಗ್ಲೂಕೋಸ್ ಪೌಡರ್ ಖರೀದಿಸಿದ್ದರು. ಪೌಡರ್ ಅನ್ನು ನೀರಿನ ಲೋಟಕ್ಕೆ ಹಾಕುವ ವೇಳೆ ಸತ್ತ ಜಿರಳೆ ಅಂಗಾಂಗ ಸೇರಿ ಇನ್ನಿತರ ಕೆಲ ಹುಳುಗಳಿರುವುದು ಕಂಡು ಬಂದಿದೆ.
ಕೂಡಲೇ ಗೋವಿಂದರಾಜು ಮೆಡಿಕಲ್ ಸ್ಟೋರ್ ಸಿಬ್ಬಂದಿಗೆ ತಿಳಿಸಿದ್ದಾರೆ. ಇದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ತಾಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದ್ದು, ಔಷಧ ಅಂಗಡಿ ಮತ್ತು ಕಂಪನಿ ವಿರುದ್ಧ ಕಾನೂನು ರೀತಿ ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.
ಔಷಧ ಅಂಗಡಿಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಹರೀಶ್, ಪೌಡರ್ ಪ್ಯಾಕೇಟ್ ತಯಾರಿಸಿರುವ ದಿನಾಂಕ ಪರಿಶೀಲನೆ ಮಾಡಿದ್ದು, ಪೌಡರ್ ಪೂರೈಕೆ ಮಾಡಿರುವವರ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಜತೆಗೆ ದೂರುದಾರರು ನೀಡಿರುವ ಗ್ಲೂಕೋಸ್ ಪೌಡರ್‌ನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವುದಾಗಿ ತಾಲೂಕು ಆರೋಗ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.