ಹಲವು ನಿರೀಕ್ಷೆಗಳನ್ನು ಮೂಡಿಸಿದ ಸಿಎಂ ಭೇಟಿ

The CM's visit raised many expectations
Published on

ಮಡಿಕೇರಿ:

ಸಿದ್ದರಾಮಯ್ಯ ೨ನೇ ಬಾರಿ ಮುಖ್ಯಮಂತ್ರಿ ಆದ ನಂತರ ಗುರುವಾರ (ಜ.೨೫) ಕೊಡಗಿಗೆ ಮೊದಲ ಸಲ ಬರುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಸ್ಥಾನಗಳಲ್ಲೂ ಜಯಭೇರಿ ಬಾರಿಸಿರುವ ಉತ್ಸಾಹದಲ್ಲಿ ಇರುವ ಕಾಂಗ್ರೆಸ್ ತನ್ನ ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ಭರದ ಸಿದ್ಧತೆ ನಡೆಸಿದೆ. ಮತ್ತೊಂದು ಕಡೆ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಸಿಎಂ ಕೊಡಗು ಭೇಟಿ ಒಂದಿಷ್ಟು ನಿರೀಕ್ಷೆಗಳನ್ನೂ ಮೂಡಿಸಿದೆ.

ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ೧೭ರ ವಯೋಮಾನದ ಬಾಲಕಿಯರ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ಉದ್ಘಾಟಿಸಲು ಈ ತಿಂಗಳ ೩ನೇ ತಾರೀಕಿನಂದು ಕೊಡಗಿಗೆ ಮುಖ್ಯಮಂತ್ರಿ ಆಗಮಿಸುತ್ತಾರೆ ಎಂದು ಈ ಮೊದಲು ಸುದ್ದಿ ಆಗಿತ್ತು. ಸಿದ್ದರಾಮಯ್ಯ ಭೇಟಿ ನಿಗದಿಯಾಗಿದೆ ಎಂದು ಕಾರ್ಯಕ್ರಮ ಸಂಘಟಕರು ಮತ್ತು ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಸುಳಿವು ನೀಡಿದ್ದರು. ಆದರೆ ಕಾರಣಾಂತರದಿಂದ ಅಂದು ರದ್ದಾಗಿದ್ದ ಮುಖ್ಯಮಂತ್ರಿಗಳ ಕೊಡಗು ಪ್ರವಾಸ ಗುರುವಾರ (ಜ.೨೫)ಕ್ಕೆ ನಿಗದಿಯಾಗಿದೆ. ಬುಧವಾರ (ಜ.೨೪) ಪಿರಿಯಾಪಟ್ಟಣ ತಾಲೂಕಿನಲ್ಲಿ ಕೆರೆಗಳ ನೀರು ತುಂಬಿಸುವ ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಿದ್ದರಾಮಯ್ಯ ನಂತರ ಗುರುವಾರ ಕೊಡಗಿಗೆ ಆಗಮಿಸುತ್ತಿದ್ದಾರೆ.

ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಮುಖ್ಯಮಂತ್ರಿ ಕಾರ್ಯಕ್ರಮ ನಿಗದಿಯಾಗಿದೆ. ಬೆಳಗ್ಗೆ ವಿರಾಜಪೇಟೆಗೆ ಆಗಮಿಸುವ ಸಿದ್ದರಾಮಯ್ಯ ಅಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆಯುವ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಮಡಿಕೇರಿಗೆ ಆಗಮಿಸುವ ಅವರು ಇಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ, ಭೂಮಿ ಪೂಜೆ ನೆರವೇರಿಸುತ್ತಾರೆ. ಇಲ್ಲಿಯೂ ಮಡಿಕೇರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಸಿ ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ ಇರುತ್ತಾರೆ. ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ ಸಚಿವ ಸಂಪುಟದ ಸಹೋದ್ಯೋಗಿಗಳ ದಂಡಿನೊಂದಿಗೆ ಸಿದ್ದರಾಮಯ್ಯ ಕೊಡಗಿಗೆ ಆಗಮಿಸುತ್ತಿರುವುದು ಸ್ಥಳೀಯ ಕಾಂಗ್ರೆಸಿಗರಲ್ಲಿ ಮಾತ್ರವಲ್ಲದೆ ಸಾರ್ಚಜನಿಕರಲ್ಲೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಯಿಂದ ಬೀಗುತ್ತಿರುವ ಸಿದ್ದರಾಮಯ್ಯ ಕೊಡಗಿಗೆ ಸೀಮಿತವಾಗಿ ಕೆಲವೊಂದು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ.

ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ, ನೆನೆಗುದಿಗೆ ಬಿದ್ದಿರುವ ಏರ್‌ಸ್ಟ್ರಿಪ್ ಯೋಜನೆ, ಜಿಲ್ಲೆಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ, ಮಾನವ-ವನ್ಯಜೀವಿ ಸಂಘರ್ಷಕ್ಕೆ ಮುಕ್ತಿ ಹಾಡಲು ಶಾಶ್ವತ ಪರಿಹಾರ, ಪ್ರಸಕ್ತ ವರ್ಷದ ಬರಗಾಲದಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಭತ್ತ, ಕರಿಮೆಣಸು ಬೆಳೆಗಾರರ ರಕ್ಷಣೆಗೆ ಪ್ಯಾಕೇಜ್, ಭವಿಷ್ಯದಲ್ಲಿ ಪ್ರವಾಹ, ಭೂಕುಸಿತದಂತಹ ಅನಾಹುತಗಳಿಂದ ಜಿಲ್ಲೆಯ ಜನರನ್ನು ರಕ್ಷಿಸಲು ಶಾಶ್ವತ ಯೋಜನೆ, ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ. ತನಕದ ಮೋಟಾರ್‌ಗಳಿಗೆ ಯಾವುದೇ ಷರತ್ತುಗಳಿಲ್ಲದೆ ಉಚಿತ ವಿದ್ಯುತ್, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಯೋಜನೆ.. ಹೀಗೆ ಹಲವು ನಿರೀಕ್ಷೆಗಳನ್ನು ಕೊಡಗಿನ ಜನ ಇಟ್ಟುಕೊಂಡಿದ್ದಾರೆ.

ಮತ್ತೊಂದು ಕಡೆ ಜಿಲ್ಲೆಗೆ ಅಗತ್ಯವಿರುವ ಸವಲತ್ತು ಮತ್ತು ಯೋಜನೆಗಳ ಬಗ್ಗೆ ಜಿಲ್ಲಾಡಳಿತದ ಕಡೆಯಿಂದಲೂ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗದೆ. ಶನಿವಾರ (ಜ.೨೦) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಈ ಸಂಬಂಧ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿದ್ದಾರೆ. ಜಿಲ್ಲೆಗೆ ಕಾನೂನು ಕಾಲೇಜು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವ್ಯಾಪ್ತಿಯಲ್ಲಿ ಫಿಜಿಯೋ ಥೆರಫಿ ಕಾಲೇಜು, ಐಟಿಡಿಪಿ ಇಲಾಖಾ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ, ಜಿಲ್ಲೆಯಲ್ಲಿನ ನಿವೇಶನರಹಿತ ಆದಿವಾಸಿಗಳಿಗೆ ನಿವೇಶನ ಒದಗಿಸುವಂತಾಗಲು ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ, ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಐಟಿಡಿಪಿ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹೀಗೆ ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿ ನಿಲಯಕ್ಕೆ ನಿವೇಶನದ ಬೇಡಿಕೆ.. ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಲಹೆಗಳನ್ನು ನೀಡಲಾಗಿದೆ.

ಹಿಂದೆಂದೂ ಕಾಣದ ಒಗ್ಗಟ್ಟು ಮತ್ತು ಸಮನ್ವಯತೆಗೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೊಡಗಿನ ಕಾಂಗ್ರೆಸ್ ಸಾಕ್ಷಿಯಾಗಿತ್ತು. ಬಿಜೆಪಿ ವಶದಲ್ಲಿದ್ದ ಕೊಡಗನ್ನು ಶತಾಯ ಗತಾಯ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಮತ್ತೆ ಗತವೈಭವದ ದಿನಗಳಿಗೆ ಕಾಂಗ್ರೆಸ್ ಮರಳಬೇಕು ಎನ್ನುವ ಉದ್ದೇಶದಿಂದ ಎಲ್ಲಾ ವೈಮನಸ್ಸು, ಗೊಂದಲ, ಅಸಮಾಧಾನಗಳನ್ನು ಬಿಟ್ಟು ಪಕ್ಷದ ಕಾರ್ಯಕರ್ತರು, ನಾಯಕರು ಕೆಲಸ ಮಾಡಿದ್ದರು. ತೆರೆಮರೆಗೆ ಸರಿದಿದ್ದ ಹಿರಿಯರೂ ಕಾಣಿಸಿಕೊಂಡು ಪಕ್ಷದ ಗೆಲುವಿಗಾಗಿ ಕೆಲಸ ಮಾಡಿದ್ದರು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ನಾಯಕರು ಪ್ರತಿಫಲಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೊಡಗು ಭೇಟಿ ಸಂದರ್ಭ ಸಿಎಂ ಸಿದ್ದರಾಮಯ್ಯ ನಿಗಮ, ಮಂಡಳಿಗಳಲ್ಲಿ ಜಿಲ್ಲೆಯ ನಾಯಕರು, ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಪಕ್ಷ ಅಧಿಕಾರದಲ್ಲಿ ಇರುವುದರಿಂದ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಅದರಲ್ಲೂ ಮೈಸೂರು-ಕೊಡಗು ಲೋಕಸಭಾ ಸ್ಥಾನದ ಮೇಲೆ ವಿಶೇಷ ಆಸಕ್ತಿ ತೋರಿಸಲಾಗುತ್ತಿದೆ. ಮುಖ್ಯಮಂತ್ರಿ ತವರು ಕ್ಷೇತ್ರ ಇದಾಗಿದ್ದು, ಈ ಬಾರಿ ಕಾಂಗ್ರೆಸ್ ಈ ಸ್ಥಾನವನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎನ್ನುವ ಮಾತುಗಳಿದ್ದು, ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ಗೆಲುವು ಸಾಧಿಸಬೇಕು ಎನ್ನುವ ಚಿಂತನೆ ನಡೆದಿದೆ. ಹಾಗಾಗಿ ಕೊಡಗಿನ ಬಗ್ಗೆ ಸಿಎಂ ವಿಶೇಷ ಒಲವು ತೋರಿಸುವ ಸಾಧ್ಯತೆ ಇದೆ ಎನ್ನುವ ಮಾತು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net