

ಮಹಾಲಿಂಗಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯವಾಗಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಿದ ಕಾಮಗಾರಿಗಳ ಮುಂದುವರೆದ ಭಾಗದ ಅನುದಾನಕ್ಕೆ ಲಂಚ ಕೇಳಿದ ಕಾರಣ ಸುಮಾರು 10 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಕ್ರೋಶ ಹೊರಹಾಕಿದರು.
ಪಟ್ಟಣದ ವಾಸವಿನಗರದ ವೆಂಕಣ್ಣ ಗುಂಡಾ ಅವರ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮೇಲೆ ಸುಳ್ಳು ಅಪಾದನೆಗಳನ್ನು ಹೊರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹೇಳತೀರದಂತಾಗಿದೆ. ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ದೇಶದಲ್ಲಿ ನಂಬರ್ 1 ಇದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಸ್ವಪಕ್ಷದ ಶಾಸಕರೇ ಹೇಳುತ್ತಿರುವಾಗ ಸಿದ್ರಾಮಯ್ಯನವರ ನೇತೃತ್ವದ ಸರ್ಕಾರ ಎಷ್ಟು ಭ್ರಷ್ಟಚಾರ ಮಾಡತ್ತಿದೆ ಎಂದು ಅರ್ಥವಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು 40ಕ್ಕೂ ಅಧಿಕ ಶಾಸಕರು ಆರೋಪಿಸುತ್ತಿದ್ದಾರೆ ಎಂದರು.
ಸ್ವತಃ ಸಿದ್ದರಾಮಯ್ಯನವರ ಕುಟುಂಬ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವದರಿಂದ ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಅವರೇ ರಾಜಿನಾಮೆ ಕೊಟ್ಟು ಗೌರವದಿಂದ ಕೆಳಗಿಳಿಯಬೇಕಾಗಿತ್ತು. ಆದರೆ, ಅವರು ರಾಜಿನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಹೇಳತೀರದಷ್ಟು ಅನ್ಯಾಯವಾಗಿದೆ. ಸುಮಾರು 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವ್ಯವಸ್ಥೆಗಳ ಜತೆಗೆ ವೈದ್ಯರೂ ಇಲ್ಲ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಸುಮಾರು 730 ಬಾಣಂತಿಯರು, 1100 ಶಿಶುಗಳು ಸಾವಿಗೀಡಾಗಿದ್ದಾರೆ. 50 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಸರ್ಕಾರದ ಅವಧಿಯಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರ, ಕೊಲೆಗಳಾಗಿರಲಿಲ್ಲ. ಮೈಕ್ರೋಫೈನಾನ್ಸಗಳಿಂದ ಸಾರ್ವಜನಿಕರು ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದ್ದರಿಂದ ಜನಸಾಮಾನ್ಯರು ಜೀವನ ನಡೆಸುವದು ಕಷ್ಟವಾಗಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ 38 ಸಾವಿರ ಕೋಟಿ ಎಸ್‌ಸಿ, ಎಸ್‌ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಮತಗಳಿಕೆಗಾಗಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದೆ. ಇದರ ವಿರುದ್ಧ ನಮ್ಮ ಪಕ್ಷ ಕಾನೂನಾತ್ಮಕ ಹೋರಾಟ ಮಾಡಲಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮುಖಂಡರಾದ ಆರ್.ಟಿ. ಪಾಟೀಲ, ಧರೆಪ್ಪ ಸಾಂಗಲಿಕರ, ಕೆ.ಆರ್. ಮಾಚಪ್ಪನ್ನವರ, ಹನುಮಂತ ತುಳಸಿಗೇರಿ, ವೆಂಕಣ್ಣ ಗುಂಡಾ, ಶಂಕರಗೌಡ ಪಾಟೀಲ, ಪ್ರಕಾಶ ಅರಳಿಕಟ್ಟಿ, ರಾಜುಗೌಡ ಪಾಟೀಲ, ಅಶೋಕಗೌಡ ಪಾಟೀಲ, ಶೇಖರ ಅಂಗಡಿ, ಸಿದ್ದುಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಜಿ.ಎಸ್. ಗೊಂಬಿ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ ಮತ್ತಿತರರಿದ್ದಾರೆ.