

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿಗೆ ಕೀರ್ತಿ ತಂದುಕೊಟ್ಟಿದ್ದ ‘ಸ್ವಚ್ಛ ನಗರಿ’ ಪಟ್ಟ ಕುಸಿಯುತ್ತ ಸಾಗಿದೆ. ಇದು ನಗರದ ನಿವಾಸಿಗಳಿಗೆ ನಿರಾಸೆ ಉಂಟುಮಾಡಿದೆ. ದೇಶದ ಸ್ವಚ್ಛ ನಗರಗಳನ್ನು ಗುರುತಿಸುವ 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ತೀವ್ರ ಹಿನ್ನಡೆ ಅನುಭವಿಸಿದೆ. ಇದರಿಂದ ಮುಜುಗರವೂ ಆಗಿದೆ.
ಸತತ 7ನೇ ವರ್ಷ ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಗುಜರಾತ್‌ನ ಸೂರತ್ ಕೂಡ ಇಂದೋರ್‌ನೊಟ್ಟಿಗೆ ಆ ಸ್ಥಾನವನ್ನು ಹಂಚಿಕೊಂಡಿದೆ. ಆದರೆ, ಮೈಸೂರು 23ನೇ ಸ್ಥಾನದಲ್ಲಿದೆ.
2015, 2016ನೇ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಮೈಸೂರು ನಂತರದ ವರ್ಷಗಳಲ್ಲಿ ರ‌್ಯಾಂಕಿಂಗ್‌ನಲ್ಲಿ ಕುಸಿಯುತ್ತಲೇ ಇದೆ. 2017ರಲ್ಲಿ 5, 2021ರಲ್ಲಿ 11ನೇ ಸ್ಥಾನ ಗಳಿಸಿತ್ತು. ಕಳೆದ 9 ವರ್ಷಗಳಲ್ಲಿ ತೀವ್ರ ಇಳಿಕೆಯನ್ನು ಮೈಸೂರು ಕಂಡಿದೆ.
ಕಸ ಸಂಗ್ರಹ, ವಿಂಗಡಣೆ, ಸಂಸ್ಕರಣೆ, ಬಳಕೆ ಮತ್ತು ಮರುಬಳಕೆಯಲ್ಲಿ ಶೇ.100ರಷ್ಟು ಅನುಷ್ಠಾನ ಸಾಧ್ಯವಾಗದೆ ಇರುವುದೇ ಸ್ವಚ್ಛತೆಯಲ್ಲಿ ಮೈಸೂರು ಹಿಂದುಳಿಯಲು ಕಾರಣ. ಇದನ್ನು 2023ರ ಸ್ವಚ್ಛತಾ ಸರ್ವೇಕ್ಷಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರು ಸಂಪೂರ್ಣವಾಗಿ ಕಸಮುಕ್ತ ನಗರವಾಗಿಲ್ಲ. ಕಸಮುಕ್ತ ನಗರಗಳಿಗೆ ನೀಡಲಾಗುವ 5+ ರ‌್ಯಾಂಕಿಂಗ್‌ನಲ್ಲಿ ಮೈಸೂರು 3+ ರ‌್ಯಾಂಕಿಂಗ್ ಅಷ್ಟೇ ಗಳಿಸಿದೆ. ನಗರದ ವ್ಯಾಪ್ತಿಯ ರಸ್ತೆ, ಚರಂಡಿ, ನಾಲೆ, ಕೆರೆಕಟ್ಟೆಗಳಲ್ಲಿ ಕಸ ಬಿದ್ದಿರುವುದರಿಂದ ಅಂಕ ಗಳಿಕೆಯಲ್ಲಿ ಹಿನ್ನೆಡೆಯಾಗಿದೆ. ಹಸಿ, ಒಣ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಣೆ ಮಾಡುವ ಕಾರ್ಯವನ್ನು ಶೇ.100ರಷ್ಟು ಜಾರಿಗೆ ತಂದಿಲ್ಲ. ಮನೆಮನೆಯಿಂದ ಕಸ ಸಂಗ್ರಹಿಸುವ ಕಾರ್ಯ ಪರಿಣಾಮಕಾರಿಯಾಗಿಲ್ಲ.
ನಗರದಲ್ಲಿ ಸಂಗ್ರಹಿಸಿದ ಕಸದಲ್ಲಿ ಸಂಸ್ಕರಣೆ, ಬಳಕೆ ಮತ್ತು ಮರುಬಳಕೆ ಪ್ರಮಾಣ ಶೇ.94.05ರಷ್ಟಿದೆ.
ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಪಾಲಿಕೆ ಇನ್ನಷ್ಟು ಪರಿಣಾಮಕಾರಿ ಆಗಿ ಕೆಲಸ ಮಾಡಬೇಕು. ಇದು ಕೇವಲ ಸ್ವಚ್ಛ ಸರ್ವೇಕ್ಷಣೆಗೆ ಸೀಮಿತವಾಗಬಾರದು. ಜತೆಗೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು ಸ್ವಚ್ಛತೆ ಕಾಪಾಡಲು ಕೈಜೋಡಿಸಬೇಕಾಗಿದೆ. ಆಗ ಮಾತ್ರ ಮೈಸೂರು ಸ್ವಚ್ಛ ನಗರಿ ಎಂಬ ಹಿರಿಮೆಯಿಂದ ಮಿನುಗಲಿದೆ. ಇಲ್ಲವಾದರೆ ಸ್ವಚ್ಛ ಸರ್ವೇಕ್ಷಣೆ ಶ್ರೇಯಾಂಕದಲ್ಲಿ ಹೀಗೆ ಕುಸಿಯುತ್ತಲೇ ಸಾಗಲಿದೆ.
ಈ ವಿಷಯದ ಕುರಿತು ಸಾರ್ವಜನಿಕರಿಂದ ಸಂಗ್ರಹಿಸಿರುವ ಅಭಿಪ್ರಾಯದ ಸಾರಾಂಶ ಇಲ್ಲಿದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಈ ಸಲ ಮೈಸೂರು ಹಿನ್ನಡೆ ಕಂಡಿದೆ. ಬೇರೆ ನಗರಗಳಿಗೆ ಹೋಲಿಸಿದರೆ ಮೈಸೂರು ಸ್ವಚ್ಛವಾಗಿ ಇದೆ. ಸೂಯೇಜ್‌ಫಾರ್ಮ್‌ನಲ್ಲಿ ಹಲವು ವರ್ಷಗಳಿಂದ ಸಂಗ್ರಹವಾದ ತ್ಯಾಜ್ಯ ವಿಲೇವಾರಿಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಈ ತ್ಯಾಜ್ಯವನ್ನು ಆದಷ್ಟು ಬೇಗ ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಮುಂದಿನ ಬಾರಿ ರ‌್ಯಾಂಕಿಂಗ್‌ನಲ್ಲಿ ಮತ್ತಷ್ಟು ಸುಧಾರಣೆ ಕಾಣಲು ಪ್ರಯತ್ನಿಸಲಾಗುವುದು.
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ
ಸ್ವಚ್ಛತಾ ಕಾರ್ಯ ಕಾಗದದಲ್ಲಿ ಮಾತ್ರ ಇದೆ. ಸರ್ವೇಕ್ಷಣೆಗೆ ಅಗತ್ಯ ಇರುವ ಮಾನದಂಡಗಳನ್ನು ಕಡತಗಳಲ್ಲಿ ತೋರಿಸಲಾಗುತ್ತಿದೆ. ಅದಕ್ಕಾಗಿ ಸೀಮಿತ ಚೌಕಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಕಡತದಲ್ಲಿರುವ ಕಲ್ಪನೆ ನಿಜ ಸ್ಥಿತಿಗೆ ಇಳಿದಿಲ್ಲ. ಪಾಲಿಕೆ, ಅರಮನೆ ಸುತ್ತಲು ಕಸದ ರಾಶಿ ಇದೆ. ಅಲ್ಲಿ ಯಾವುದೂ ಅಚ್ಚುಕಟ್ಟತನ ಇಲ್ಲ. ಇದು ಒಂದು ಭಾಗದ ಸ್ಥಿತಿಯಲ್ಲ. ಮೈಸೂರಿನ ಬಹುತೇಕ ಕಡೆ ಇದೇ ಸ್ಥಿತಿ ಇದೆ. ಹೀಗಾದರೆ, ಮೈಸೂರು ಸ್ವಚ್ಛ ನಗರಿ ಆಗಲು ಸಾಧ್ಯವೇ?
ಪಿ.ಡಿ.ಸಿಂಚನಾ, ವಿದ್ಯಾರ್ಥಿನಿ
ಮನೆಯ ಕಸವನ್ನು ಹಸಿ, ಒಣ ಆಗಿ ವಿಂಗಡಿಸಿ ಕೊಡಲಾಗುತ್ತದೆ. ಆದರೆ, ಮನೆಗೆ ಬಂದು ಕಸ ಸ್ವೀಕರಿಸುವ ಪೌರಕಾರ್ಮಿಕರು, ವಿಭಜನೆ ಮಾಡಿರುವ ಕಸವನ್ನು ವಾಹನದಲ್ಲಿ ಒಂದೆಡೆ ಹಾಕಿಕೊಂಡು ಮಿಶ್ರಣ ಮಾಡುತ್ತಾರೆ. ಹೀಗೆ ಮಾಡುವುದಾದರೆ, ಪಾಲಿಕೆ ಕಸ ವಿಂಗಡನೆ ಕುರಿತು ಏಕೆ ಜಾಹೀರಾತು ಕೊಟ್ಟು ಪ್ರಚಾರ ಮಾಡಬೇಕು? ಈ ಕುರಿತು ಜನರಲ್ಲಿ ಜಾಗೃತಿ ಮೂಡಿದ್ದರೂ, ಪಾಲಿಕೆಯೇ ಅದನ್ನು ಹಾಳು ಮಾಡುತ್ತಿದೆ. ಅದು ‘ಹೇಳುವುದು ಒಂದು, ಮಾಡುವುದು ಇನ್ನೊಂದು’ ಎನ್ನುವಂತಿದೆ.
ಡಿ.ಸಂಗೀತಾ, ಸಾರ್ವಜನಿಕರು
ಈ ವಿಷಯದಲ್ಲಿ ಪಾಲಿಕೆ ವಿಫಲವಾಗಿದೆ. ಸ್ವಚ್ಛತಾ ಸರ್ವೇಕ್ಷಣೆಗಾಗಿ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಸ್ವಚ್ಛತೆ ಕಾಯ್ದುಕೊಳ್ಳಲು ನಗರದಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಆದರೆ, ಈ ಸಲ ಒಂದು ತಂಡವಾಗಿ ಪಾಲಿಕೆ ಕಾರ್ಯನಿರ್ವಹಣೆ ಮಾಡಿಲ್ಲ. ಪೌರಕಾರ್ಮಿಕರ ಕೊರತೆ ಇದೆ. ಇದನ್ನು ಭರ್ತಿ ಮಾಡಲು ಕ್ರಮ ವಹಿಸುತ್ತಿಲ್ಲ. ಸಾರ್ವಜನಿಕರ ಅರಿವಿನ ಕೊರತೆ, ಅವರ ಸಹಭಾಗಿತ್ವ ಕಡಿಮೆಯಿಂದಾಗಿ ಈ ಸಲ ನಗರಕ್ಕೆ ಹಿನ್ನಡೆಯಾಗಿದೆ.
ನಾರಾಯಣ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ, ಪೌರಕಾರ್ಮಿಕರ ಮುಖಂಡ
ಕಟ್ಟಡ ತ್ಯಾಜ್ಯ ವಿಲೇವಾರಿ, ಸಂಸ್ಕರಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಆಗಲಿಲ್ಲ. ವಿವಿಧ ಕಾರಣಗಳಿಗೆ ಈ ಸಲ ಕಡಿಮೆ ಅಂಕಗಳು ಬಂದಿವೆ. ನಗರದ ಸ್ವಚ್ಛತೆ ಕುರಿತು ಕೇವಲ 70 ಸಾವಿರ ಸಾರ್ವಜನಿಕರು ಅಭಿಪ್ರಾಯ ತಿಳಿಸಿದ್ದಾರೆ. ಈ ಸಂಖ್ಯೆ 3 ಲಕ್ಷ ದಾಟಿದ್ದರೆ ಅನುಕೂಲವಾಗುತ್ತಿತ್ತು. ಸಾರ್ವಜನಿಕ ಸಹಭಾಗಿತ್ವ ಇನ್ನಷ್ಟು ಹೆಚ್ಚಾಗಬೇಕು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಹಿನ್ನೆಡೆಯಾಗಿರುವ ಅಂಶಗಳ ಕುರಿತು ಪರಿಶೀಲನೆ ಮಾಡಿ, ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು. ಈ ಮೂಲಕ ಮುಂದಿನ ವರ್ಷ ರ‌್ಯಾಂಕಿಂಗ್‌ನಲ್ಲಿ ಮೈಸೂರು ನಗರವನ್ನು ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋಗಲಾಗುವುದು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ
ಮೈಸೂರು 23ನೇ ಸ್ಥಾನ ಪಡೆದಿರುವುದು ಬೇಸರದ ಸಂಗತಿ. ಮಹಾರಾಜರು ಜಾರಿಗೆ ತಂದಿದ್ದ ನಗರದ ಯೋಜನಾಬದ್ಧ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವಲ್ಲಿ ನಾವು ವಿಫಲವಾಗಿದ್ದೇವೆ. ಕಟ್ಟಡ ತ್ಯಾಜ್ಯ ಸಂಸ್ಕರಣೆ ಆಗಿಲ್ಲ. ಈ ಕುರಿತು ಘಟಕ ನಿರ್ಮಿಸಲು ಸಾಧ್ಯವಾಗಿಲ್ಲ. ಸೂಯೇಜ್‌ಫಾರ್ಮ್‌ನಲ್ಲಿರುವ 27 ಟನ್ ಕಸ ವಿಲೇವಾರಿ ಮಾಡಲಾಗಿಲ್ಲ. ಸಾರ್ವಜನಿಕರಿಗೆ ಅರಿವು, ಅವರ ಸಹಭಾಗಿತ್ವ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇಂದೂರ್‌ನಂತೆ ರಚನಾತ್ಮಕ, ಕ್ರಿಯಾತ್ಮಕ ಕೆಲಸಗಳು ನಮ್ಮಲ್ಲಿ ಮಾಡಲಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷೃ ತೋರಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳುವ ಮೂಲಕ ಮುಂದಿನ ವರ್ಷ 10 ಸ್ಥಾನದೊಳಗೆ ಮೈಸೂರು ಬರುವಂತೆ ಕ್ರಮ ವಹಿಸಬೇಕಿದೆ.
ಶಿವಕುಮಾರ್, ಮಾಜಿ ಮೇಯರ್
ಸ್ವಚ್ಛತೆ ಕುರಿತು ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ. ದುಡ್ಡು ಮಾತ್ರ ಖರ್ಚಾಗುತ್ತಿದೆ. ತೋರಿಕೆಗೆ ಕೆಲವು ಕಡೆ ಕೆಲಸಗಳು ನಡೆಯುತ್ತವೆ. ಅದು ಪರಿಣಾಮಕಾರಿಯಾಗಿಲ್ಲ. ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಸಂಪರ್ಕ ರಸ್ತೆಗಳಲ್ಲಿರುವ ಕಸ ತೆರವುಗೊಳಿಸುತ್ತಿಲ್ಲ. ಕಸ ಸಂಗ್ರಹ, ವಿಂಗಡಣೆ, ಸಂಸ್ಕರಣೆ, ಬಳಕೆ ಮತ್ತು ಮರುಬಳಕೆ ಶೇ.100ರಷ್ಟು ನಡೆಯುತ್ತಿಲ್ಲ. ಅದನ್ನು ವೈಜ್ಞಾನಿಕವಾಗಿ ಕೈಗೊಂಡಿಲ್ಲ.
ಸಾಗರ ಸುರೇಶ್, ಉದ್ಯೋಗಿ
ಸ್ವಚ್ಛತೆ ವಿಷಯದಲ್ಲಿ ಪಾಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ದಾಖಲೆಯಲ್ಲಿ ಮಾತ್ರ ಮನೆ ಮನೆ ಕಸ ವಿಂಗಡನೆಯಾಗುತ್ತಿದೆ. ವಾಸ್ತವ ಇದಕ್ಕೆ ಬಹಳಷ್ಟು ದೂರವಾಗಿದೆ. ನಗರದ ಪ್ರಮುಖ ಪ್ರದೇಶದಲ್ಲೂ ಕಸ ನಿರ್ವಹಣೆ ಈಗಲೂ ಸರಿಯಾಗಿ ನಡೆಯುತ್ತಿಲ್ಲ. ಈ ವಿಷಯದಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಪಾಲಿಕೆ ಮಾಡುತ್ತಿಲ್ಲ. ಜಾಗೃತಿ ಕಾರ್ಯಕ್ರಮಗಳು ಜನರನ್ನು ತಲುಪುತ್ತಿಲ್ಲ.
ಡಾ. ಸಿ.ಎನ್.ಮಂಜುನಾಥ, ವೈದ್ಯರು