

ಗುರುಪುರ: ಮುಸ್ಲಿಂ ಚಾಲಕನಿದ್ದ ರಿಕ್ಷಾದಲ್ಲಿ ಹಿಂದು ಯುವತಿ ಕುಳಿತು ಮಾತುಕತೆ ನಡೆಸುತ್ತಿದ್ದ ವಿಚಾರವಾಗಿ ಇತ್ತಂಡಗಳ ನಡುವೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತೂರು ಗ್ರಾಮದ ನೋಣಾಲು ಹಿಂದು ರುದ್ರಭೂಮಿ ಬಳಿ ಗುರುವಾರ ರಾತ್ರಿ ಘರ್ಷಣೆ ನಡೆದಿದೆ.
ನೋಣಾಲು ಪರಿಸರದ ಯುವತಿ ಪ್ರತಿದಿನ ಮೊಹಮ್ಮದ್ ನಾಸಿರ್ ಯಾನೆ ಯಾಚಿ ಎಂಬುವರ ರಿಕ್ಷಾದಲ್ಲಿ ಕುಪ್ಪೆಪದವಿಗೆ ಕೆಲಸಕ್ಕೆ ಹೋಗುತ್ತಿದ್ದಳು. ದಿನಂಪ್ರತಿ ಸಂಜೆ 6.45ಕ್ಕೆ ಮನೆಗೆ ಬರುತ್ತಿದ್ದ ಆಕೆ ಗುರುವಾರ ಸಂಜೆ 7.30ರವರೆಗೂ ನೋಣಾಲು ರುದ್ರಭೂಮಿ ಬಳಿ ರಿಕ್ಷಾಕ್ಕೆ ಟಾರ್ಪಲ್ ಎಳೆದು ಒಳಗೆ ಇಬ್ಬರೂ ಕುಳಿತಿದ್ದರು. ಈ ವಿಷಯ ತಿಳಿಯುತ್ತಲೇ ಸ್ಥಳೀಯ ಹಿಂದು ಯುವಕರು ಪ್ರಶ್ನಿಸಿದ್ದು, ಈ ವೇಳೆ ಮಾತಿನ ಚಕಮಕಿ, ಹಲ್ಲೆ ನಡೆದಿದೆ. ಮಾಹಿತಿ ಪಡೆದ ಬಜ್ಪೆ ಪೊಲೀಸ್ ನಿರೀಕ್ಷಕ ಪ್ರಕಾಶ್ ಹಾಗೂ ಸಿಬ್ಬಂದಿ ಗುಂಪು ಚದುರಿಸಿದರು. ಹೊಡೆದಾಟದ ವೇಳೆ ಗಾಯಗೊಂಡಿದ್ದ ರಿಕ್ಷಾ ಚಾಲಕ ನಾಸಿರ್ ಮತ್ತು ಇನ್ನೊಬ್ಬ ರಿಕ್ಷಾ ಚಾಲಕ ಶೇಖರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವತಿ ಮನೆಗೆ ಹೋಗುವ ದಾರಿ ಮಧ್ಯೆ ನೂದೊಟ್ಟು ಎಂಬಲ್ಲಿ ರಿಕ್ಷಾ ನಿಲ್ಲಿಸುವಂತೆ ಸೂಚಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಆ ವೇಳೆ ಸ್ಥಳಕ್ಕಾಗಮಿಸಿದ ಶೇಖರ್, ರೀತು ಮತ್ತು ಚಿತ್ತರಂಜನ್ ಎಂಬುವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಿಕ್ಷಾದಿಂದ ಎಳೆದು ಹಲ್ಲೆ ನಡೆಸಿದ್ದಾರೆ ಎಂದು ನಾಸಿರ್ ದೂರು ನೀಡಿದ್ದಾರೆ.
ನಾನು ಮನೆಗೆ ಹೋಗುವಾಗ ದಾರಿಮಧ್ಯೆ ರಿಕ್ಷಾವೊಂದರ ಹತ್ತಿರ ಜನ ಸೇರಿದ್ದರು. ವಿಚಾರಿಸಿದಾಗ ‘ಕೋಲ ಕಟ್ಟುವ ನಿನಗೆ ಇಲ್ಲಿ ಏನು ಕೆಲಸ’ ಎಂದು ನಾಸಿರ್ ಹೀಯಾಳಿಸಿರುವುದಲ್ಲದೆ, ಫಯಾಜ್, ಜಾಹಿದ್ ಮತ್ತು ಇಸ್ಮಾಯಿಲ್ ಹಲ್ಲೆ ನಡೆಸಿದ್ದಾರೆ ಎಂದು ಶೇಖರ್ ದೂರು ನೀಡಿದ್ದಾರೆ.
ಪೊಲೀಸರು ಇತ್ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.