

ರಂಗಾಯಣ ಈ ಬಾರಿ ‘ನಮ್ಮೀ ತಾಯ್ನೆಲ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಚಿಣ್ಣರ ಮೇಳಕ್ಕೆ ರಂಗಾಯಣ ಆವರಣದ ವನರಂ ಗದಲ್ಲಿ ಸಂಭ್ರಮದ ಚಾಲನೆ ದೊರೆಯಿತು. ಮೇಳವು ಮೇ 5ರವರೆಗೆ ನಡೆಯಲಿದೆ.
ಮೇಳಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ರಂಗಭೂಮಿಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಮಕ್ಕಳು ರಂಗಭೂಮಿಯ ಕಡೆಗೆ ಆಕರ್ಷಿತರಾಗಲಿ ಎಂಬ ಕಾರಣಕ್ಕೆ ಪಾಲಕರು ಮಕ್ಕಳನ್ನು ಚಿಣ್ಣರ ಮೇಳಕ್ಕೆ ಸೇರಿಸಿದ್ದಾರೋ ಅಥವಾ ಮಕ್ಕಳು ಮೊಬೈಲ್‌ನಿಂದ ದೂರವಿರಲಿ ಎಂಬ ಕಾರಣಕ್ಕೆ ಸೇರಿಸಿದ್ದಾರೋ ಗೊತ್ತಿಲ್ಲ. ಏನೇ ಆದರೂ ಶಿಬಿರಕ್ಕೆ ಮಕ್ಕಳು ಆಗಮಿಸಿರುವುದು ಒಳ್ಳೆಯ ವಿಚಾರ. ಇದರಿಂದ ಮಕ್ಕಳ ಭವಿಷ್ಯ ಉತ್ತಮಗೊಳ್ಳುತ್ತದೆ ಎಂದರು.
ನನ್ನ ಬದುಕಿನಲ್ಲಿ ರಂಗಭೂಮಿ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ನಾನು ಇಂತಹ ವೇದಿಕೆಯಲ್ಲಿ ಇಂದು ನಿಂತು ಮಾತನಾಡಲು ಕಾರಣವಾಗಿದ್ದೇ ರಂಗಭೂಮಿ. ನನಗೆ ಸಂಸ್ಕಾರ ದೊರೆತ್ತಿದ್ದೇ ರಂಗಭೂಮಿಯಲ್ಲಿ. ನಾಲ್ಕಾರು ಜನರ ಜತೆ ಬೆರೆತಾಗ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳು ಆಗುತ್ತವೆ ಎಂದು ಹೇಳಿದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಮಕ್ಕಳು ಶಾಲೆ, ಪಾಠ, ಪರೀಕ್ಷೆಗಳ ನಡುವೆ ಪರೀಕ್ಷೆಗಳ ನಡುವೆ ಪರಿತಪಿಸುತ್ತಿದ್ದಾರೆ. ಅವರ ಮನಸ್ಸು ಹಗುರವಾಗಲು ಇಂತಹ ಶಿಬಿರಗಳ ಅವಶ್ಯಕತೆ ಇದೆ. ರಂಗಾಯಣ 1997ರಲ್ಲಿ ಚಿಣ್ಣರ ಮೇಳ ಪ್ರಾರಂಭಿಸಿ ಇದುವರೆಗೆ ನಡೆಸಿಕೊಂಡು ಬರುತ್ತಿದೆ ಎಂದರು.
ಪ್ರತಿ ಮಗು ಹುಟ್ಟುತ್ತ ವಿಶ್ವಮಾನವನಾಗಿ ಬೆಳೆಯುತ್ತ ಬೆಳೆಯುತ್ತ ಸಂಕುಚಿತ ಸಂಕೋಲೆಯಲ್ಲಿ ಬಂಧಿಯಾಗಿ ಅಲ್ಪಮಾನವನಾಗುತ್ತಾನೆ. ಮಕ್ಕಳು ವಿಶ್ವ ಮಾನವರಾಗಿ ರೂಪುಗೊಳ್ಳಲು ಒಳ್ಳೆಯ ಶಿಕ್ಷಣ, ಸಂಸ್ಕಾರ ಅವಶ್ಯಕ. ಶಿಕ್ಷಣ ಮತ್ತು ಸಂಸ್ಕಾರ ನಾಲ್ಕುಗೋಡೆಗಳ ನಡುವೆ ಸಿಗುವುದಿಲ್ಲ. ಅದು ಮನೆಯಲ್ಲಿ, ಶಾಲೆಯಲ್ಲಿ ಹಾಗೂ ಇಂತಹ ಶಿಬಿರಗಳಲ್ಲಿ ದೊರೆಯುತ್ತದೆ ಎಂದು ಹೇಳಿದರು.
ಚಿಣ್ಣರ ಮೇಳವನ್ನು ದಿ.ರಂಗ ನಿರ್ದೇಶಕ ಶ್ರೀನಿವಾಸ ಭಟ್ ಅವರಿಗೆ ಅರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮರಕಲೆ ಚಾಂಪಿಯನ್ ಜಿ.ಪ್ರಣತಿ, ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಲಾವಿದ ಶಿವಾಜಿರಾವ್ ಜಾದವ್, ಶಿಬಿರ ನಿರ್ದೇಶಕ ಕೃಷ್ಣ ಕುಮಾರ್ ನಾರ್ಣಕಜೆ ಇದ್ದರು.