ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ

Published on

ಹುಬ್ಬಳ್ಳಿ: ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಗಾದಿ ರಾಜ್ಯದಲ್ಲಿ ಖಾಲಿ ಇಲ್ಲ. 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಡಿ.ಕೆ. ಶಿವಕುಮಾರ ಅವರು ಸಿಎಂ ಆಗಲಿ ಎಂಬುದು ಅಭಿಮಾನಿಗಳ ಹಾಗೂ ಅವರದ್ದೂ ಆಸೆ ಇದೆ. ಯಾಕೆಂದರೆ, ಅವರು ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವಧಿ ಮುಗಿದ ಮೇಲೆ ಡಿ.ಕೆ. ಶಿವಕುಮಾರ ಅವರು ಆಗಬೇಕೆಂದು ಭಾವಿಸುತ್ತೇವೆ. ದಲಿತ ಸಿಎಂ ಆಗಬೇಕೆಂಬ ಕೂಗು ಇದೆ. ನನಗೂ ‘ಜೈ ಭೀಮ್’ ಅಧಿಕಾರಕ್ಕೆ ಬರಬೇಕೆಂಬ ಆಸೆ ಇದೆ. ಆದರೆ, ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ಟಗರ್‌ಗೆ ಟಕ್ಕರ್ ಯಾರೂ ಕೊಡಲ್ಲ. ನಮ್ಮ ಅಭಿಪ್ರಾಯ ಮಾತ್ರ ಮಂಡಿಸುತ್ತೇವೆ. ನಾನು ಕಾಂಗ್ರೆಸ್‌ನ ಶಿಸ್ತಿನ ಶಿಪಾಯಿ. ಮಂತ್ರಿ ಆಗಿದ್ದೀರಿ, ಬಿಟ್ಟು ಬಿಡಿ ಎಂದರೆ ಬಿಟ್ಟುಕೊಡುತ್ತೇನೆ. ನಾನು ಸಿಎಂ, ಡಿಸಿಎಂ ರೇಸ್‌ನಲ್ಲಿ ಇಲ್ಲ. ಪಕ್ಷದ ಜವಾಬ್ದಾರಿ ಕೇಳಿದ್ದೇನೆ ಎಂದರು.

ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಬಿಜೆಪಿಯಲ್ಲಿ ಐದು ಗುಂಪುಗಳಾಗಿವೆ. ಅವರ ಸ್ಥಿತಿ ಮೊದಲು ಸರಿಪಡಿಸಿಕೊಳ್ಳಲಿ. ಬರೀ ಹಿಂದು-ಮುಸ್ಲಿಂ ಎಂದು ಜಗಳ ಹಚ್ಚುತ್ತಿದ್ದಾರೆ. ಅದು ಅಭಿವೃದ್ಧಿಗಾಗಿ ಅಲ್ಲ, ಖುರ್ಚಿಗಾಗಿ ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net