ಜಾತಿಗಣತಿಯಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಖಚಿತ

ex minister k.s.eshwarappa
Published on

ಶಿವಮೊಗ್ಗ: ಯಾವುದೇ ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಜಾತಿ ಜನಗಣತಿ ಮಾಡಲು ಹೊರಟಿರುವುದು ಅಸಂವಿಧಾನಿಕ ಮತ್ತು ಧರ್ಮ ಒಡೆಯುವ ಕುತಂತ್ರವಾಗಿದೆ. ವಿರೋಧದ ನಡುವೆಯೂ ಗಣತಿ ಮುಂದುವರಿಸಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

160 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದ್ದ ಕಾಂತರಾಜ ಆಯೋಗದ ವರದಿಯನ್ನು ಹೈಕಮಾಂಡ್ ನಿರ್ದೇಶನದಂತೆ ಮೂಲೆಗೆ ಎಸೆದು ಇದೀಗ ಮತ್ತೆ 420 ಕೋಟಿ ರೂ. ವೆಚ್ಚದಲ್ಲಿ ಜಾತಿ ಜನಗಣತಿ ಮಾಡಲು ಹೊರಟಿರುವ ಸಿದ್ದರಾಮಯ್ಯ ಅವರ ತೀರ್ಮಾನವನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ವಿರೋಧಿಸಿದ್ದಾರೆ. ಗಣತಿಗೆ ಹಠ ಮಾಡಿದರೆ ಮುಂದಾಗುವ ಪರಿಣಾಮವನ್ನು ಕಾಂಗ್ರೆಸ್ ಸರ್ಕಾರವೇ ಎದುರಿಸಬೇಕಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಗಣತಿ ನಡೆಸುವುದಾಗಿ ಹೇಳಿದೆ. ಈಗಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಜಾತಿ ಗಣತಿ ಮಾಡುವ ಅವಶ್ಯಕತೆ ಇಲ್ಲ. ಆದರೆ ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ಭಾಗವಾಗಿ ಹಿಂದುಗಳನ್ನು ಜಾತಿ, ಉಪಜಾತಿಗಳನ್ನಾಗಿ ವಿಂಗಡಿಸಿ, ಅವರ ಜನಸಂಖ್ಯೆಯನ್ನು ಅಧಿಕೃತವಾಗಿ ತಗ್ಗಿಸಿ, ಅಲ್ಪಸಂಖ್ಯಾತರನ್ನು ಹೆಚ್ಚಿಸಿ ಅವರ ಓಲೈಕೆ ಮಾಡಿಕೊಂಡು ತನ್ನ ರಾಜಕೀಯ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವುದು ಜಾತಿಗಣತಿ ಹಿಂದಿನ ಉದ್ದೇಶವಾಗಿದೆ ಎಂದು ದೂರಿದರು.

ಹಿಂದು ಸಮಾಜವನ್ನು ದುರ್ಬಲಗೊಳಿಸಲು ಮಾಡುವ ಕುತಂತ್ರಗಳನ್ನು ನಾವು ವಿರೋಧಿಸುತ್ತೇವೆ. ಜಾತಿಗಣತಿಯನ್ನು ಅಸಂವಿಧಾನಿಕವಾಗಿ ನಡೆಸುತ್ತಿದ್ದು, ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಕಾರಣವಾಗಬಹುದು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ವಿರುದ್ಧ ಬಹಳಷ್ಟು ಸಚಿವರೇ ತಿರುಗಿ ಬಿದ್ದಿದ್ದಾರೆ. ಇದು ಸಿದ್ದರಾಮಯ್ಯ ಅವರ ಹಿಂದು ವಿರೋಧಿ ಹಾಗೂ ಧರ್ಮ ಒಡೆಯುವ ಹಿಡನ್ ಅಜೆಂಡಾದ ಸಿದ್ಧಾಂತ ಜಗಜ್ಜಾಹೀರಾಗಿದೆ ಎಂದರು. ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಸತ್ಯನಾರಾಯಣ, ಮೋಹನ್, ನಕುಲ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net