

ಕೆ.ಆರ್.ನಗರ : ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುತಂತ್ರದಿಂದ ಹೆದರಿಸುತ್ತಿದ್ದಾರೆ. ಜನ ಬೆಂಬಲ ಇರುವವರೆಗೂ ಈ ಕುತಂತ್ರಗಳು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ತಾಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಬುಧವಾರ ಅನಾವರಣಗೊಳಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಯಗಳನ್ನು ಯಥಾವಾತ್ತಾಗಿ ಜಾರಿಗೆ ತಂದಿದ್ದೇವೆ. ಐದು ಗ್ಯಾರಂಟಿಗಳಿಗೆ ಸರ್ಕಾರ ವರ್ಷಕ್ಕೆ ಸುಮಾರು 60 ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ. ಕೇಂದ್ರ ಸರ್ಕಾರಕ್ಕಿಂತಲೂ ರಾಜ್ಯದ ಹಣಕಾಸು ಇಲಾಖೆ ಉತ್ತಮವಾಗಿದೆ ಎಂದರು.
ದಾಸ ಶ್ರೆಷ್ಠ ಭಕ್ತ ಕನಕದಾಸರು ಜ್ಞಾನ, ಭಕ್ತಿ, ಅಧ್ಯಾತ್ಮ ಮತ್ತು ಕೀರ್ತನೆಗಳ ಮೂಲಕ ಪ್ರಸಿದ್ಧಿ ಪಡೆದರು. ಸಂಗೊಳ್ಳಿ ರಾಯಣ್ಣ ದೇಶಭಕ್ತಿ ಯ ಸ್ವರೂಪ. ಧೈರ್ಯ, ಶೌರ್ಯ ಪ್ರರಾಕ್ರಮಿಯಾಗಿದ್ದರು ಎಂದರು.
ಕ್ಷೇತ್ರದ ಶಾಸಕ ಡಿ.ರವಿಶಂಕರ್, ಜನಾನುರಾಯಿ ನಾಯಕರಾಗಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಇತರ ಮಂತ್ರಿಗಳ ಬಳಿ ವೈಯುಕ್ತಿಕವಾಗಿ ಯಾವುದೇ ರೀತಿಯ ಅಪೇಕ್ಷೆ ಪಡೆಯದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಇತರ ಸಚಿವರ ಸಮ್ಮುಖದಲ್ಲಿ ಕಾಮಗಾರಿಗಳಿಗೆ ಚಾಲನೆ ಕೊಡಲಾಗುತ್ತದೆ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡುವ ಗ್ರಾಮಗಳು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದ್ದು, ಅಂತಹ ಗ್ರಾಮಗಳಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಚೀರ‌್ನಹಳ್ಳಿಶಿವಣ್ಣ, ಕಾಂಗ್ರೆಸ್ ಮುಖಂಡ ಜಿ.ಎಸ್.ವೆಂಕಟೇಶ್ ಮಾತನಾಡಿದರು. ಯುವ ಘರ್ಜನೆ ಮಹಿಳಾ ಸಂಘದ ಅಧ್ಯಕ್ಷೆ ಸರಸ್ವತಿ, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ್, ಗಣೇಶ್, ಮಾದೇಗೌಡ, ಶಿಲ್ಪಗೌತಮ್, ತೋಟೇಗೌಡ, ಡಿ.ಕೆ.ಕೊಪ್ಪಲು ರಾಜಯ್ಯ, ಸಿದ್ದನಕೊಪ್ಪಲುರಾಘು, ಕುಮಾರ್, ನಾಗೇಂದ್ರ, ಇಂದ್ರೇಶ್, ಸಂದೀಪ್‌ಕುಮಾರ್ ಎಸ್.ಜೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್ ಮತ್ತಿತರರು ಇದ್ದರು.