ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಭಾವುಕ

24 SGN Bommai
Published on

ಶಿಗ್ಗಾಂವಿ: ನಾನು ನಿಮ್ಮ ಋಣದಲ್ಲಿದ್ದೇನೆ. ನನಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಶಕ್ತಿ ನಿಮ್ಮಿಂದ ಬಂದಿದೆ. ನಿಮ್ಮ ಒಂದು ಮತದಿಂದ ಶಾಸಕ, ಮಂತ್ರಿಯಾಗಿ ಈಗ ಮುಖ್ಯಮಂತ್ರಿಯಾಗಿ ರಾಜ್ಯದ ಸೇವೆ ಮಾಡುವ ಯೋಗ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಸಂತೆ ಮೈದಾನದಲ್ಲಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಜವಾಬ್ದಾರಿ ಇರುವುದರಿಂದ ಪದೇಪದೆ ಕ್ಷೇತ್ರಕ್ಕೆ ಆಗಮಿಸಲು ಆಗುತ್ತಿಲ್ಲ. ಈಗ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದಿನಗಳು ಬಂದಿವೆ. ಆ ಶಕ್ತಿ ಈ ಮಣ್ಣಿನಿಂದ ನನಗೆ ಬಂದಿದೆ. ತಾಲೂಕಿನಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಶಿಗ್ಗಾಂವಿ ಇಂದು ದೊಡ್ಡ ಪ್ರಮಾಣದಲ್ಲಿ ಬದಲಾಗುತ್ತದೆ. ಮುಖ್ಯಮಂತ್ರಿಯಾಗಿ ರಾಗ, ದ್ವೇಷ ಮರೆತು ದಿನಕ್ಕೆ 14 ತಾಸು ಕೆಲಸ ಮಾಡುತ್ತಿದ್ದೇನೆ. ನೀವು ಇಂದು ತೋರಿಸಿದ ಪ್ರೀತಿಗೆ ಮತ್ತೆರಡು ತಾಸು ಹೆಚ್ಚಿಗೆ ಕೆಲಸ ಮಾಡುತ್ತೇನೆ. ಇಂದು ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವದ ದಿನ. ಅವಳ ಸಾಹಸವನ್ನು ಸ್ಮರಿಸುವ ದಿನ. ಬ್ರಿಟಿಷರ ವಿರುದ್ಧ ಹೋರಾಡಿದ ನಮ್ಮ ನಾಡಿನ ವೀರ ಮಹಿಳೆ ಚನ್ನಮ್ಮ. ಅವಳನ್ನು ನೆನಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮಹಿಳೆಯರ ಕೈಗೆ ಉದ್ಯೋಗ ನೀಡುವ ಕೆಲಸ ಮಾಡುತ್ತೇನೆ. ಇಷ್ಟೊಂದು ಪ್ರಮಾಣದಲ್ಲಿ ಸೇರಿರುವ ತವರಿಗರನ್ನು ನೋಡಿ ಮತ್ತಷ್ಟು ಉತ್ಸುಕನಾಗಿದ್ದೇನೆ. ನೀವು ನೀಡಿರುವ ಮತ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದರು. ನೀವು ನನ್ನ ಮೇಲಿಟ್ಟಿರುವ ಭರವಸೆಗೆ ಚ್ಯುತಿ ತರುವುದಿಲ್ಲ. ಇವತ್ತು ನಿಮ್ಮನ್ನೆಲ್ಲ ನೋಡಿ ಆನೆ ಬಲ ಬಂದಂತಾಗಿದೆ. ಈ ಶಕ್ತಿಯನ್ನು ವೈಯಕ್ತಿಕವಾಗಿ ಗುಲಗಂಜಿ ಕಾಳಿನಷ್ಟೂ ಲಾಭ ಪಡೆಯುವುದಿಲ್ಲ ಎನ್ನುತ್ತ ಭಾವುಕರಾದರು.

ಕಾರ್ಯಕ್ರಮದಲ್ಲಿ ನವೀನ ಸವಣೂರ, ತಿಪ್ಪಣ್ಣ ಸಾತಣ್ಣವರ, ಗಂಗಾಧರ ಸಾತಣ್ಣವರ, ದೇವಣ್ಣ ಚಾಕಲಬ್ಬಿ, ರೇಣುಕನಗೌಡ ಪಾಟೀಲ, ವೀರೇಶ ಆಜೂರ, ರಮೇಶ ವನಹಳ್ಳಿ, ಶಿವಾನಂದ ಮ್ಯಾಗೇರಿ, ಮಂಜು ಹಾವೇರಿ, ಮುತ್ತು ಯಲಿಗಾರ, ಪ್ರಶಾಂತ ಬನ್ನಿಕೊಪ್ಪ. ರೂಪಾ ಬನ್ನಿಕೊಪ್ಪ, ಸುಭಾಸ ಚವ್ಹಾಣ ಮತ್ತಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net