150 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

1
Published on

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ 158.81 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಶನಿವಾರ ಬೆಂ-ಮೈ ಹೆದ್ದಾರಿ ಪರಿಶೀಲಿಸಿ ಹಾಗೂ ಸ್ಪೀಡ್ ಡಿಟೆಕ್ಟರ್ ಉದ್ಘಾಟಿಸಿ ಮಾತನಾಡಿದ ಅವರು, ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್ ರಸ್ತೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನವೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು, ಪ್ರವೇಶ ಮತ್ತು ನಿರ್ಗಮನ ರಸ್ತೆಗಳನ್ನು ಮುಂದಿನ ಮಾರ್ಚ್ ಮಾಹೆಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಹೆದ್ದಾರಿಯಲ್ಲಿ ಸ್ಪೀಡ್ ಡಿಟೆಕ್ಟರ್‌ಗಳನ್ನು ಅಳವಡಿಸಿರಲಿಲ್ಲ. ಹಾಗಾಗಿ ಅಪಘಾತಗಳು ಹೆಚ್ಚಾಗಿದ್ದವು. ಜುಲೈ ತಿಂಗಳಲ್ಲಿ ಅಪಘಾತಗಳು ಕಡಿಮೆಯಾಗಿವೆ. ಜೂನ್‌ನಲ್ಲಿ 20 ಹಾಗೂ ಜುಲೈನಲ್ಲಿ 5 ಅಪಘಾತಗಳು ಸಂಭವಿಸಿವೆ. ಸ್ಪೀಡ್ ಡಿಟೆಕ್ಟರ್‌ಗಳನ್ನು 10 ಕಿ.ಮೀ ಅಂತರದಲ್ಲಿ ಅಳವಡಿಸಿದರೆ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯ. ಮುಖ್ಯ ಕಾರ್ಯದರ್ಶಿಗಳು ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕಾಗಿಯೇ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕಳೆದ ಬಿಜೆಪಿ ಸರ್ಕಾರ ಹೆದ್ದಾರಿ ಕಾಮಗಾರಿ ಬಗ್ಗೆ ಆಸಕ್ತಿ ತೋರಿದ್ದರೆ ಎಲ್ಲ ಕೆಲಸಗಳು ಸರಿಯಾಗಿ ಆಗುತ್ತಿದ್ದವು. ಅವರು ಆತುರಾತುರವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ಸರ್ವೀಸ್ ರಸ್ತೆ ಎಲ್ಲವನ್ನೂ ಸರಿಯಾಗಿ ಮಾಡಲು ತಿಳಿಸಲಾಗಿದೆ. ಇದರ ಜತೆಗೆ ಅಂಡರ್‌ಪಾಸ್ ಸರಿಪಡಿಸಲು ಹೇಳಲಾಗಿದೆ. ಮೇ ತಿಂಗಳಿನ ಒಳಗೆ ಎಲ್ಲ ಕಾಮಗಾರಿ ಮುಕ್ತಾಯವಾಗುತ್ತವೆ ಎಂದರು.

ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net