

ದೇವದುರ್ಗ: ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಬನದ ಹುಣ್ಣಿಮೆ ಸೋಮವಾರ ಮಹಾರಥವನ್ನು ತೇರಿನ ಮನೆಯಿಂದ ಸಾವಿರಾರು ಭಕ್ತರ ಮಧ್ಯೆ ಶ್ರದ್ಧೆ-ಭಕ್ತಿಯಿಂದ ಹೊರತರಲಾಯಿತು.
ಶ್ರೀಮಠದ ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಭಕ್ತರು ತೇರಿನ ಮನೆಗೆ ವಿಶೇಷ ಪೂಜೆ ಸಲ್ಲಿಸಿದರು. ಹುಣ್ಣಿಮೆ ನಿಮಿತ್ತ ಊರೊಳಿಗಿನ ಬೂದಿಬಸವೇಶ್ವರ ದೇವಸ್ಥಾನದಿಂದ ವಿವಿಧ ಬಡಾವಣೆ ಮೂಲಕ ಮೂಲಮಠಕ್ಕೆ ಬೂದಿಬಸವೇಶ್ವರರ ಮೂರ್ತಿ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಸಕಲ ವಾದ್ಯಮೇಳ, ನಂದಿಕೋಲು ಕುಣಿತ, ಮಹಿಳೆಯರು ಕುಂಭಕಳಸ ಹಿಡಿದು ಭಾಗವಹಿಸಿ ಭಕ್ತಿಭಾವ ಮೆರೆದರು. ಸಂಜೆ 5ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೇರಿನ ಮನೆಯಿಂದ ರಥವನ್ನು ಹೊರತರಲಾಯಿತು. ಸಾವಿರಾರು ಭಕ್ತರು ಜೈಕಾರ ಹಾಕಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಜ.14ರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿವೆ. ಫೆ.6 ರಂದು ಸಾಮೂಹಿಕ ವಿವಾಹ, ಫೆ.9ರಂದು ಮಹಾರಥೋತ್ಸವ ಜರುಗಲಿದೆ. ಜಾತ್ರೆಗೆ ದೇವಸ್ಥಾನದಲ್ಲಿ ಸಿದ್ಧತೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸುಲ್ತಾನಪುರ ಮಠದ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಸದಾಶಿವಯ್ಯ ತಾತ ಗುರುವಿನ, ಚನ್ನಬಸಯ್ಯಸ್ವಾಮಿ, ಬೂದಿಬಸವ ತಾತ ಇತರರಿದ್ದರು.