

ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಶ್ರೀ ಶರಣ ಬಸವೇಶ್ವರ ರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೆ ಹುಲ್ಲಳ್ಳಿ ಗ್ರಾಮದ ಶ್ರೀಮಂತ ಬಸವಂತರಾಯ ಸರದೇಸಾಯಿಯವರು ಮನೆತನದಿಂದ ಸಂತಕಾಯಿ, ಕಮದತ್ತದಿಂದ ಬಾಳೆಕಂಬ ಮತ್ತು ತಳಿರು ತೋರಣ, ಕೆಂಗಲ್ಲ ಕಡಪಟ್ಟಿ ಗ್ರಾಮದಿಂದ ಹಗ್ಗ ಆಗಮಿಸುತ್ತಿದ್ದಂತೆ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ರಥಕ್ಕೆ ಬಾಳೆಕಂಬ, ತೆಂಗಿನ ಗರಿ, ತಳಿರು ತೋರಣಗಳಿಂದ ಶೃಂಗರಿಸಿದಲ್ಲದೇ 11 ಅಡಿ ಉದ್ದದ ರುದ್ರಾಕ್ಷಿ ಮಾಲೆ ಮತ್ತು ಹೂಮಾಲೆಗಳಿಂದ ವಿಶೇಷವಾಗಿ ರಥ ಶೃಂಗರಿಸಲಾಗಿತ್ತು. ಸಂಜೆ 6 ಗಂಟೆಗೆ ಹರಗುರುಚರಮೂರ್ತಿಗಳು, ಅನೇಕ ಮಠಾಧೀಶರ ಸುತ್ತಮುತ್ತಲಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಿತು.
ಶ್ರೀ ಶರಣ ಬಸವೇಶ್ವರ ರಥದ ಮುಕಟಪ್ರಾಯವಾದ ಕಳಸವು ಅಡಿಹಾಳ ಗ್ರಾಮದಿಂದ ಆಗಮಿಸುತ್ತಿದ್ದಂತೆ ಭವ್ಯ ಸ್ವಾಗತ ಕೋರಿ ಗ್ರಾಮಸ್ಥರಿಂದ ವಿಶೇಷ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ರಥಕ್ಕೆ ಏರಿಸಲಾಯಿತು.
ಬಿಸನಾಳದ ನಂದಿಕೋಲ ಕುಣಿತ ಜಾತ್ರೆಗೆ ಬಂದ ಭಕ್ತರ ಕಣ್ಮನ ಸೆಳೆಯಿತು. ನಂದಿಕೋಲನ್ನು ಅಂಗೈಯಲ್ಲಿ ಮೇಲೆತ್ತುವುದು, ಹೆಬ್ಬೆಟ್ಟಿನ ತುದಿಯಲ್ಲಿ ನಿಲ್ಲಿಸುವುದು, ಹಲ್ಲಿನಲ್ಲಿ ಹಿಡಿದು ಯುವಕರು ಸಾಹಸ ಪ್ರದರ್ಶಿಸುವುದು ವಿಶೇಷವಾಗಿತ್ತು.
ಚಿತ್ತರಗಿ ಸಂಸ್ಥಾನಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು, ಹಡಗಲಿ ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಇಂಗಳೇಶ್ವರದ ಚನ್ನಬಸವ ಮಹಾಸ್ವಾಮಿಗಳು, ಬಿಲ್‌ಕೆರೂರದ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತಿತರರರು ಉಪಸ್ಥಿತರಿದ್ದರು.