

ಗುಳೇದಗುಡ್ಡ: ಪಟ್ಟಣದಲ್ಲಿ ಮುರುಘಾಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳ ಭವ್ಯ ರಥೋತ್ಸವ ಭಾನುವಾರ ಸಂಜೆ ಸಂಭ್ರಮದಿಂದ ನಡೆಯಿತು.
ಲಿಂ. ನೀಲಕಂಠ ಮಹಾಸ್ವಾಮಿಗಳವರ 25ನೇ ವಾರ್ಷಿಕ ಪುಣ್ಯರಾಧನೆ ಪ್ರಯುಕ್ತವಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಭವ್ಯ ರಥೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು.
ಬೆಳಗ್ಗೆ ಕರ್ತೃ ಗದ್ದುಗೆಯನ್ನು ತಳಿರು, ತೋರಣಗಳಿಂದ ಶೃಂಗರಿಸಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಪಟ್ಟಣದ ಅರಳಿಕಟ್ಟಿಯಿಂದ ಗಚ್ಚಿನಕಟ್ಟಿಯವರೆಗೆ ಮುರುಘಾಮಠದ ಅದ್ದೂರಿ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ ಕರಡಿ ಮಜಲು, ನಂದಿ ಕುಣಿತ, ವೀರಗಾಸೆ ಸೇರಿ ಹಲವು ಜನಪದ ವಾದ್ಯ ಮೇಳಗಳು ಸಾಥ್ ನೀಡಿ ರಥೋತ್ಸವಕ್ಕೆ ವಿಶೇಷ ಮೆರಗು ತಂದವು.
ಶ್ರೀಮಠದ ಶ್ರೀ ಕಾಶಿನಾಥ ಮಹಾಸ್ವಾಮಿಗಳು ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು.
ಮಹಿಳೆಯರು ತಲೆ ಮೇಲೆ ವಚನ ಕಟ್ಟುಗಳ ಪುಸ್ತಕಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ರಥದ ಮೇಲೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಗುಳೇದಗುಡ್ಡ ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.