ಹಿಪ್ಪರಗಿ ಹಿರೇಮಠದ ರಥೋತ್ಸವ ಅದ್ದೂರಿ

The chariot festival at Hipparagi Hiremath is grand.
The chariot festival at Hipparagi Hiremath is grand.
Published on

ರಬಕವಿ/ಬನಹಟ್ಟಿ: ತಾಲೂಕಿನ ಹಿಪ್ಪರಗಿ ಗ್ರಾಮದ ಕೃಷ್ಣಾ ನದಿ ತಟದ ಪಾವನ ಕ್ಷೇತ್ರ ಹಿಪ್ಪರಗಿ ಹಿರೇಮಠದ ಜಾತ್ರೆ ಅಂಗವಾಗಿ ಮಹಾರಥೋತ್ಸವ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಗುರು ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಿವಾಷ್ಟೋತ್ತರ ಶಿವನಾಮಾವಳಿ, ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ನೆರವೇರಿತು. ನಂತರ 10ಕ್ಕೆ ಸಕಲ ವಾದ್ಯಗಳೊಂದಿಗೆ ಶ್ರೀಗಳ ರಜಮೂರ್ತಿ ಪಲ್ಲಕ್ಕಿ ಉತ್ಸವ, ರಥದ ಕಳಸ-ಹಗ್ಗ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀಮಠಕ್ಕೆ ತಲುಪಿ ಸಂಪನ್ನಗೊಂಡಿತು. ಮಧ್ಯಾಹ್ನ ಮಾಹಾಪ್ರಸಾದ ಜರುಗಿತು.

ಮುಸ್ಸಂಜೆ ಹೊತ್ತಿನಲ್ಲಿ ಲಿಂ.ಶ್ರೀ ಗುರು ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳ ರಥೋತ್ಸವ ಅದ್ದೂರಿಯಾಗಿ ಜರುಗಿತು. ಈ ವೇಳೆ ಹರಹರ ಮಹಾದೇವ ಜಯಘೋಷಗಳು ಮೊಳಗಿದವು. ಭಕ್ತರು ಬೆಂಡು ಬೆತ್ತಾಸು, ಉತ್ತತ್ತಿ ರಥಕ್ಕೆ ಸಮರ್ಪಿಸಿದರು. ಕರಡಿ ವಾದ್ಯ ಮೇಳ, ಡೊಳ್ಳಿನ ಕೈಪಟ್ಟು, ಕಂಡ್ಯಾಳ ಬಾಸಿಂಗು, ನಂದಿಕೋಲು, ಕುದುರೆ ಕುಣಿತ, ಚಿನಿಕೋಲು ಮೇಳ ಮುಂತಾದ ಜನಾಪದ ಕಲಾ ವಾದ್ಯ ಮೇಳಗಳು ರಥೋತ್ಸವಕ್ಕೆ ಮೆರುಗು ತಂದವು.

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರದ್ಯ ಶಿವಾಚಾರ್ಯ ಸ್ವಾಮಿಗಳು, ಬನಹಟ್ಟಿ ಶರಣಬಸವ ಶಿವಾಚಾರ್ಯ ಸ್ವಾಮಿಗಳು, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ನಂದೇಶ್ವರ-ಮಧುರಖಂಡಿ ಕಮರೀಮಠದ ದುಂಡೇಶ್ವರ ಮಹಾರಾಜರು, ಶೇಗುಣಶಿ ವಿರಕ್ತ ಮಠದ ಮಹಾಂತ ದೇವರು, ಹುನ್ನೂರಿನ ವಿಶ್ವನಾಥ ಶಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net