

ತೇರದಾಳ: ಹನ್ನೆರಡನೇ ಶತಮಾನದ ಅನುಭವ ಮಂಟಪದ ಪ್ರಾತ್ಯಕ್ಷಿಕೆ ಮೂಲಕ ಶರಣರ ವಚನಗಳ ಕಂಪು ಶಾಲಾ ಅಂಗಳದಲ್ಲಿ ಜರುಗಿರುವುದು ವಿಶೇಷವಾಗಿತ್ತು.
ಸ್ಥಳೀಯ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅನುಭವ ಮಂಟಪ ಪ್ರಾತ್ಯಕ್ಷಿಕೆ ಹಾಗೂ ಮಾತೃ ಭೋಜನ ಅರ್ಥಪೂರ್ಣ ಕಾರ್ಯಕ್ರಮವೊಂದು ನಡೆಯಿತು.
ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುವಿನ ನೆಲದಲ್ಲಿ ವಚನ ಸಾಹಿತ್ಯ ಹಾಗೂ ಶರಣರ ಅನುಭಾವವು ಪಟ್ಟಣದಲ್ಲಿ ಅಷ್ಟೇ ಅಲ್ಲದೆ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಶಾಲಾ ಅಂಗಳದಲ್ಲೂ ಕಂಪು ಸೂಸುತ್ತಿದೆ.
ಮಕ್ಕಳು ಅಲ್ಲಮ, ಬಸವಣ್ಣ, ಅಕ್ಕ ಸೇರಿ ಶರಣ, ಶರಣೆಯರ ವೇಷಭೂಷಣ ಧರಿಸಿಕೊಂಡು ಶರಣರ ಮಾದರಿ ಅನುಭವ ಮಂಟಪದಲ್ಲಿ ತಮ್ಮ ವಚನಗಳನ್ನು ಪಠಿಸುವ ಮೂಲಕ ಮೆಚ್ಚುಗೆ ಪಡೆದರು. ಮಕ್ಕಳಿಗೆ ತಾಯಂದಿರು ಭೋಜನ ಮಾಡಿಸಿ ಮಾತೃಭೋಜನ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೆ, ವಿವಿಧ ಸ್ಪರ್ಧೆಗಳಾದ ಕೂಸುಮರಿ, ಹೆಜ್ಜೆ ಮೇಲೆ ಹೆಜ್ಜೆ, ಹೂಪ್ಸ್ ಗೇಮ್, ಬಲೂನ್ ಆಟಗಳನ್ನು ಆಡಿ ಮಕ್ಕಳು ಖುಷಿಪಟ್ಟರು.
ಮಾರ್ಗದರ್ಶಿ ಶಿಕ್ಷಕ ಸಂತೋಷ ಖವಾಸಿ ಸೇರಿ ಶಿಕ್ಷಕ, ಶಿಕ್ಷಕಿಯರು, ಪಾಲಕರು ಭಾಗಿಯಾಗಿದ್ದರು.