ಅವಳಿ ನಗರದಲ್ಲಿ ಆಗಲಿದೆ ಬದಲಾವಣೆ

h31- S S SHETTER 1
Published on

ಹುಬ್ಬಳ್ಳಿ: ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಕಂಪನಿಗಳು ಕಾರ್ಯಾರಂಭ ಮಾಡಲಿದ್ದು, ಸಾಕಷ್ಟು ಬದಲಾವಣೆ ಕಾಣಲಿದ್ದೇವೆ. ತನ್ಮೂಲಕ ಅವಳಿ ನಗರದ ಅಭಿವೃದ್ಧಿ ಕುರಿತು ತಂದೆಯವರಾದ ದಿ. ಎಸ್.ಎಸ್. ಶೆಟ್ಟರ್ ಅವರು ಕಂಡ ಕನಸು ನನಸು ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಎಸ್.ಎಸ್. ಶೆಟ್ಟರ್ ಸ್ಮಾರಕ ದತ್ತಿ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜೀವನಕ್ಕೆ ತಂದೆಯವರ ಮಾರ್ಗದರ್ಶನ ಅನುಕರಣೀಯವಾಗಿದೆ. ಅವರ ಆದರ್ಶವನ್ನು ಪಾಲನೆ ಮಾಡುತ್ತಿದ್ದೇವೆ ಎಂದರು.

‘ನೆಮ್ಮದಿಯ ಬದುಕಿನ ಸೂತ್ರ ವಚನ ಸಾಹಿತ್ಯ’ ಎಂಬ ವಿಷಯ ಕುರಿತು ಮಾತನಾಡಿದ ಸಾಹಿತಿ ಡಾ. ಬಸವರಾಜ ಜಗಜಂಪಿ ಮಾತನಾಡಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಭುದೇವ ಹಿಪ್ಪರಗಿ, ದೇವಪ್ಪ ಸುರೆ, ಎಚ್.ವಿ. ವಾಸಪ್ಪ, ಧರ್ಮಪ್ಪ ಹೊರಕೇರಿ, ಎ.ಆರ್. ಜೋಶಿ, ಡಿ.ಕೆ. ಕುಲಕರ್ಣಿ, ರಾಮಚಂದ್ರ ಗರಗ, ಅಜ್ಜಪ್ಪ ಹೊರಕೇರಿ, ಮೆಹಬೂಬ್ ಸಾಬ್ ನದಾಫ್ ಅವರನ್ನು ಸನ್ಮಾನಿಸಲಾಯಿತು.

ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮೋಹನ ಶೆಟ್ಟರ್, ಇತರರು ಇದ್ದರು. ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಪಾಟೀಲ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ನಿರೂಪಿಸಿದರು. ಮಲ್ಲಿಕಾರ್ಜುನ ಸಾವಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಶೆಟ್ಟರ್ ಜೀವನಾಧಾರಿತ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಹು-ಧಾ ಪೊಲೀಸ್ ಕಮಿಷನರೇಟ್​ನ ಸೈಬರ್ ಶಾಖೆಯ ಸಿಬ್ಬಂದಿ ಶಿವಾನಂದ ತಿಮ್ಮಾಪುರ ಸೈಬರ್ ಅಪರಾಧದ ಕುರಿತು ಮಾಹಿತಿ ನೀಡಿದರು.

ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಎಸ್.ಎಸ್. ಶೆಟ್ಟರ್ ಫೌಂಡೇಷನ್ ಜಂಟಿಯಾಗಿ ಸಂಘಟಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net