

ಮಂಡ್ಯ: ಒಂದೆರಡು ಸಾಹಿತ್ಯ ಪ್ರಕಾರಗಳನ್ನು ಹೊರತುಪಡಿಸಿ ಕನ್ನಡ ಸಾಹಿತ್ಯದ ಇತರ ಯಾವುದೇ ಪ್ರಕಾರಗಳಿಗೆ ಪುನಶ್ಚೇತನದ ಅವಶ್ಯಕತೆ ಇಲ್ಲ ಎನ್ನುವ ಮಾತು ಸತ್ಯ ಎಂದು ಹಿರಿಯ ಲೇಖಕಿ ಬಾನು ಮುಸ್ತಾಕ್ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಮಾನಾಂತರ ವೇದಿಕೆ 1ರ ಚಿಕ್ಕದೇವರಾಜ ಒಡೆಯರ್ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪುನಶ್ವೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು ಎನ್ನುವ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಾಹಿತ್ಯ ಮತ್ತು ಆತ್ಮಕತೆಗಳ ಪ್ರಕಾರ ಬಿಟ್ಟರೆ ಉಳಿದ ಸಾಹಿತ್ಯ ಪ್ರಕಾರಗಳಿಗೆ ಪುನಶ್ಚೇತನದ ಅವಶ್ಯಕತೆ ಬೀಳುವುದಿಲ್ಲ. ಆತ್ಮಕತೆ ಬರೆಯುವ ಲೇಖಕಿ ಮೊದಲು ತನ್ನ ಹೊರ ಕವಚ ತೆಗೆದು ಅಂತರಂಗ ಮಾತ್ರ ಬರೆಯುವ ಸವಾಲು ಇರುತ್ತದೆ. ಆದರೆ ಇದು ಅತ್ಯಂತ ಕಷ್ಟಕರ ಕೆಲಸ. ಈ ಮಧ್ಯೆ ಭಾರತೀಯ ಮುಸ್ಲಿಂ ಮಹಿಳೆಯಾಗಿ ಸಮಾಜವನ್ನು ನೋಡಿದ್ದು ಮತ್ತು ಸಮಾಜ ನನ್ನ ನ್ನು ನೋಡಿದ ದೃಷ್ಟಿಕೋನದಲ್ಲಿ ನನ್ನ ಆತ್ಮಕತೆ ರಚಿಸುತ್ತಿದ್ದೇನೆ ಎಂದರು.
ಇತ್ತೀಚಿನ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವಕಾಶ ಸಿಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರನ್ನೂ ಮನುಷ್ಯರ ರೀತಿಯಲ್ಲಿ ನೋಡುವಂಥ ಸ್ಥಿತಿ ಬಂದಿದೆ. ಹಾಗಾಗಿ ಇವರಿಗೆ ಸಂಬಂಸಿದ ಆತ್ಮಕತೆ ಸೇರಿ ಇತರ ಸಾಹಿತ್ಯಗಳಲ್ಲಿ ನಿರೀಕ್ಷೆ ಇಟ್ಟುಕೊಳ್ಳಬಹುದು. ಪ್ರಬಂಧ ಪ್ರಾಕಾರ ನಮ್ಮ ಸಾಹಿತ್ಯಕ್ಕೆ ಆಂಗ್ಲ ಭಾಷೆಯ ಕೊಡುಗೆ ಆಗಿದೆ. ಆದರೆ ಪ್ರಬಂಧ ಸಂಕಲನ ಪ್ರಕಟಕ್ಕೆ ಪ್ರಕಾಶಕರು ಒಲವು ತೋರಿಸುತ್ತಿಲ್ಲ ಎಂದು ಹೇಳಿದರು.
ಆತ್ಮಕಥನಗಳು ವಿಷಯದಲ್ಲಿ ಮಾತನಾಡಿದ ಡಾ.ಅರುಣ್ ಜೋಳದ ಕೂಡ್ಲಿಗಿ, ಆತ್ಮಕತೆಗಳಲ್ಲಿ ನಿರೂಪಕನ ಮಧ್ಯಪ್ರವೇಶ ಆಗಬಾರದು. ಇಲ್ಲಿ ನಿರೂಪಕನ ಗೈರು ಹಾಜರಿ ಇರಬೇಕು. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಕೊಡಬಹುದು. ಪೌರಕಾರ್ಮಿಕ, ಮರಣೋತ್ತರ ಪರೀಕ್ಷೆ ಮಾಡುವಾತ, ಬುಡಕಟ್ಟು ಸಮುದಾಯದ ವ್ಯಕ್ತಿಗಳ ಆತ್ಮಕತೆ ಬರಬೇಕಿದೆ. ಸಮಯದಾಯ ಅಧ್ಯಯನದ ಕೃತಿಗಳು ಕಡಿಮೆ ಆಗುತ್ತಿವೆ. ಕನ್ನಡ ಸಾಹಿತ್ಯ ಲೋಕಕ್ಕೆ ಕಾಲಿಡಲು ಕಾಯುತ್ತಿರುವ ಅನುಭವ ಲೋಕಗಳು ಸಾಕಷ್ಟಿದೆ. ಮೇಲ್ಜಾತಿ ಗಂಡಸರ, ಹೆಂಗಸರ ಅತ್ಮಕತೆ ಬಂದಿದೆ. ಸಾಹಿತ್ಯ ಲೋಕದ ಮೇಲೆ ಪರಿಣಾಮ ಬೀರಬಲ್ಲ ದಲಿತ ಮಹಿಳೆಯ ಆತ್ಮಕತೆ ಬಂದಿಲ್ಲ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಆತ್ಮಕತೆಗಳು ಶೇ.1ರಷ್ಟು ಮಾತ್ರ ಇದೆ. ಬೇರೆ ಬಾಷೆಗಳ ಆತ್ಮಕತೆಗಳ ಕೊಡುಗೆ ಕನ್ನಡಕ್ಕೆ ದೊಡ್ಡ ಪ್ರಮಾಣದಲ್ಲಿ ಇದೆ. ಆದರೆ ಕನ್ನಡ ಸ್ಥಿತಿ ಹೀಗೆ ಇಲ್ಲ. ಆತ್ಮಕತೆಗಳ ಮೂಲಕ ಹೊರಹೊಮ್ಮಬಹುದಾದ ಕಣ್ಣೋಟಗಳು ಇನ್ನೂ ಗ್ರಹಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ಸಾಹಿತ್ಯದ ಬಗ್ಗೆ ವಿಚಾರ ಮಂಡಿಸಿದ ಡಾ.ಬಿ.ಎಸ್. ಶೈಲಜಾ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆಯುತ್ತಿದೆ. ಸೃಜನಶೀಲ ವಿಜ್ಞಾನ ಸಾಹಿತ್ಯದಲ್ಲಿ ಈಗ ಹೆಚ್ಚು ಪುಸ್ತಕಗಳು ಬರುತ್ತಿವೆ. ಕನ್ನಡದಲ್ಲಿ ತಾಂತ್ರಿಕ ಭಾಷೆ ಅಷ್ಟು ಬೆಳೆದಿಲ್ಲ. ಸಿ.ವಿ.ರಾಮನ್ ಅವರ ಜೀವನಚರಿತ್ರೆ ವಿಭಿನ್ನವಾಗಿ ಬಂದಿದೆ. ವಿಜ್ಞಾನ ಸಾಹಿತ್ಯದಲ್ಲಿ ಆಂಗ್ಲ ಶಬ್ದಗಳನ್ನು ಬಳಸಬೇಕಾದ ಅನಿವಾರ್ಯತೆ ಈಗಲೂ ಇದೆ. ವ್ಯಂಗ್ಯ ಚಿತ್ರಗಳ ಮೂಲಕವೂ ವಿಜ್ಞಾನವನ್ನು ಸರಳವಾಗಿ ಹೇಳಬಹುದು. ಕತೆಗಳ ಮೂಲಕ ಹೇಳುವ ವಿಜ್ಞಾನ ಸಾಹಿತ್ಯಕ್ಕೆ ಬೇಡಿಕೆ ಇದೆ. ವಿಜ್ಞಾನ ಸಾಹಿತ್ಯಕ್ಕೆ ನವಮಾಧ್ಯಮಗಳನ್ನೂ ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಪುಸ್ತಕ ಮೂಲಕ ಓದುವ ಆನಂದವೇ ಬೇರೆ. ತನ್ನ ಭಾವನೆಗಳನ್ನು ಬರವಣಿಗೆ ಮೂಲಕ ವ್ಯಕ್ತಪಡಿಸುವ ಹವ್ಯಾಸವನ್ನು ಮಕ್ಕಳಿಗೆ ಎಳೆವೆಯಲ್ಲೇ ಕಲಿಸಬೇಕು ಎಂದರು.
ಪ್ರಬಂಧ ಸಾಹಿತ್ಯದ ಬಗ್ಗೆ ವಿಚಾರ ಹಂಚಿಕೊಂಡ ಚ.ಹ.ರಘುನಾಥ, ಪ್ರಬಂಧ ಪ್ರಾಕಾರಕ್ಕೆ ಇನ್ನೂ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಕನ್ನಡ ವಿಮರ್ಶೆ ಪ್ರಬಂಧಕಾರರನ್ನು ಗುರುತಿಸಿಲ್ಲ. ಆರಕ್ಕೇರದ ಮೂರಕ್ಕೇರದ ಸ್ಥಿತಿ ಕನ್ನಡ ಪ್ರಬಂಧ ಸಾಹಿತ್ಯದ್ದು. ಪ್ರಬಂಧ ಮಾದರಿಯಲ್ಲಿ ಈಗ ಸಿದ್ಧ ಸೂತ್ರ ಇದೆ. ಪ್ರಬಂಧ ಪ್ರಾಕಾರದಲ್ಲಿ ದಲಿತ ಸಂವೇದನೆ ತುಂಬ ಕಡಿಮೆ ಇದೆ. ಕತೆ, ಕವಿತೆ, ಕಾದಂಬರಿಯ ಭಾವನೆ ಮೂಡಿಸುವ ಸಾಮರ್ಥ್ಯ ಪ್ರಬಂಧಕ್ಕೂ ಇದೆ ಎಂದು ಹೇಳಿದರು.
ವಿ.ಸಿ.ಉಮಾಶಂಕರ್ ಗೋಷ್ಠಿಯನ್ನು ವಿರ್ವಹಣೆ ಮಾಡಿದರು. ಗೋರಳ್ಳಿ ಜಗದೀಶ್ ನಿರೂಪಿಸಿ, ಡಾ.ಗುಡಗಂಟಿ ವಿಠ್ಠಲ್ ಸ್ವಾಗತಿಸಿ, ಸಿ.ಎಂ.ಕ್ರಾಂತಿಸಿಂಹ ವಂದಿಸಿದರು.