ಸಮಾಜಕ್ಕೆ ಒಳಿತಾಗುವ ಪುಸ್ತಕ ನೀಡುವುದೇ ಸವಾಲು

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇತಿಹಾಸ ತಿರುಚಿ ಹೇಳುವ ಲೇಖಕರು ಹಾಗೂ ಅಂತಹ ಕೃತಿಗಳನ್ನು ಪ್ರಕಟಿಸುವ ಪ್ರಕಾಶಕರ ಮಧ್ಯೆ ಸಮಾಜಕ್ಕೆ ಒಳಿತಾಗುವ ಪುಸ್ತಕಗಳನ್ನು ನೀಡುವುದೇ ಸವಾಲಿನ ಕೆಲಸ. ಈ ಸಮಯದಲ್ಲಿ ರಾಷ್ಟ್ರೊತ್ಥಾನ ಸಾಹಿತ್ಯ ಅನೇಕ ಉತ್ತಮ ಕೃತಿಗಳನ್ನು ನೀಡಿ ಸುಸಂಸ್ಕೃತ ಸಮಾಜ ನಿರ್ಮಿಸುವ ಕಾರ್ಯ ಮಾಡುತ್ತಿದೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಬೆಂಗಳೂರಿನ ರಾಷ್ಟ್ರೊತ್ಥಾನ ಸಾಹಿತ್ಯವು ಸಂಸ್ಕಾರ ಭಾರತಿ, ವನಿತಾ ಸೇವಾ ಸಮಾಜ ಹಾಗೂ ವೀರ ಸಾವರಕರ್​ ಬಳಗ ವತಿಯಿಂದ ನಗರದ ನಿವೇದಿತಾ, ಆದರ್ಶ ಬಾಲಿಕಾ ಪ್ರೌಢ ಶಾಲೆಯಲ್ಲಿ ಏರ್ಪಡಿಸಿರುವ ಕನ್ನಡ ಪುಸ್ತಕ ಹಬ್ಬ-2025 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ತಪ್ಪು ಮಾಹಿತಿ ನೀಡುವ ಬರಹಗಾರರೇ ಹೆಚ್ಚಾಗಿದ್ದಾರೆ. ಇದರಿಂದ ಓದುಗರು ಯಾವುದು ಸತ್ಯ, ಯಾವುದು ಮಿಥ್ಯ? ಎಂಬ ಗೊಂದಲಕ್ಕೆ ಒಳಗಾಗುವಂತಾಗಿದೆ. ಇದೆಲ್ಲದರ ನಡುವೆ ರಾಷ್ಟ್ರೊತ್ಥಾನ ಸಾಹಿತ್ಯ ಸೇರಿ ಇನ್ನೂ ಅನೇಕ ಪ್ರಕಾಶಕರು ಸಮಾಜ ಸುಧಾರಣೆಗೆ ಬೇಕಾದ ಕೃತಿಗಳನ್ನು ನೀಡುವ ಮೂಲಕ ಜನರಲ್ಲಿ ಓದುವ ಆಸಕ್ತಿ ಬೆಳೆಸುತ್ತಿದ್ದಾರೆ ಎಂದರು.

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಗಳ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲೇ ಲೋಪಗಳು ಕಂಡು ಬಂದಿವೆ. ಇದರಿಂದ ನಮ್ಮ ಅಧಿಕಾರಿಗಳಲ್ಲಿನ ಭಾಷಾ ಜ್ಞಾನ ಅರಿವಾಗುತ್ತದೆ. ಪುಸ್ತಕ ಓದದ ಕಾರಣ ಇಂತಹ ಅವಾಂತರಗಳು ಸೃಷ್ಟಿಯಾಗುತ್ತವೆ. ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಲ್ಲದೆ, ಪಾಲಕರೂ ಇದಕ್ಕೆ ಸಹಕರಿಸಬೇಕು. ಕನ್ನಡ ಉಳಿವಿಗೆ ಪುಸ್ತಕಗಳ ಬಳಕೆ ಹೆಚ್ಚಾಗಬೇಕು ಎಂದ ಅವರು, ಪ್ರಕಾಶಕರು ಪ್ರಕಟಣಾ ಲೋಕದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.

ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕ ಓದಿನಿಂದ ನಿಖರ, ಶುದ್ಧ ಮಾಹಿತಿ ಜತೆಗೆ ಜ್ಞಾನ ವೃದ್ಧಿಯಾಗಲಿದೆ. ಹೆಚ್ಚು ಓದುವುದರಿಂದ ನಮ್ಮ ಭಾವ ಕೋಶವೂ ವಿಶಾಲಗೊಳ್ಳಲಿದೆ. ನಾಗರಿಕತೆ ಉಳಿದಿದ್ದು ಪುಸ್ತಕದಿಂದಲೇ. ಪುಸ್ತಕ ಪ್ರೀತಿಸುವ ವ್ಯಕ್ತಿ ಎಂದಿಗೂ ಒಬ್ಬಂಟಿಗನಲ್ಲ ಎಂದರು.

ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಯುವುದು ಪಾಲಕರು, ಶಿಕ್ಷಕರಿಂದಲೇ. ಆದರೆ ಇಂದಿನ ದಿನಗಳಲ್ಲಿ ಇವರೇ ಪುಸ್ತಕದಿಂದ ದೂರವಾಗುತ್ತಿದ್ದಾರೆ. ಎಲ್ಲರೂ ಪುಸ್ತಕಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮಕ್ಕಳಿಗೆ ಸರಿಯಾದ ಮಾಹಿತಿ, ಇತಿಹಾಸ ತಿಳಿಸುವ ಕೆಲಸ ಮಾಡಬೇಕು. ಪುಸ್ತಕದ ಓದು ಉನ್ನತ ಹವ್ಯಾಸವಾಗಿದ್ದು, ಇಂತಹ ಪುಸ್ತಕ ಹಬ್ಬಗಳು ನಿರಂತರವಾಗಿ ನಡೆಯಲಿ ಎಂದರು.

ವನಿತಾ ಸೇವಾ ಸಮಾಜದ ಅಶೋಕ ನಾಯ್ಕ, ವೀರ ಸಾವರಕರ್​ ಗೆಳೆಯರ ಬಳಗದ ವಿಷ್ಣು ಹುಕ್ಕೇರಿ, ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಅಶೋಕ ಸೋನಕರ, ಡಾ. ಅನಿತಾ ರೈ., ಗುರುರಾಜ ಅಗಡಿ, ಪ್ರಕಾಶಕ ರಮಾಕಾಂತ ಜೋಶಿ, ಸಮೀರ ಜೋಶಿ, ಹ.ವೆಂ. ಕಾಖಂಡಕಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಇತರರು ಇದ್ದರು.

ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಸ್ವಾಗತಿಸಿದರು. ಶಶಿಧರ ನರೇಂದ್ರ ನಿರೂಪಿಸಿದರು. ವಿನಾಯಕ ಭಟ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net