

ಮಂಜುನಾಥ ತಿಮ್ಮಯ್ಯ ಮೈಸೂರು
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಸಕ್ತ ವರ್ಷದಂತೆಯೇ ಸ್ಥಿರತೆ ಕಾಯ್ದುಕೊಂಡು ಇನ್ನಷ್ಟು ಸುಧಾರಣೆ ಮಾಡುವ ಸವಾಲಿನ ಕೆಲಸ ಇದೀಗ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ಮೇಲಿದೆ. ಅದಕ್ಕಾಗಿ ಈಗಿನಿಂದಲೇ ಕಾರ್ಯಯೋಜನೆ ಹಾಕಿಕೊಳ್ಳಬೇಕಿದೆ.
ಈ ಸಲ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆ ಕಂಡಿದೆ. ಜಿಲ್ಲೆಯು ರಾಜ್ಯ ಮಟ್ಟದಲ್ಲಿ 19ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. 36,796 ವಿದ್ಯಾರ್ಥಿಗಳ ಪೈಕಿ 32,083 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.87.19ರಷ್ಟು ಫಲಿತಾಂಶ ಬಂದಿದೆ. ಇದರಿಂದ ವಿದ್ಯಾರ್ಥಿಗಳು ಸಂಭ್ರಮಗೊಂಡಿದ್ದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಮಾಧಾನಗೊಂಡಿದ್ದಾರೆ.
‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದ ಅಗ್ರ 5 ಜಿಲ್ಲೆಗಳಲ್ಲಿ ಸ್ಥಾನ ಪಡೆಯುವಂತೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಡಿಪಿ ಸಭೆಯಲ್ಲಿ ಗುರಿ ನೀಡಿದ್ದರು. ಅದು ಸಾಧ್ಯವಾಗಿಲ್ಲ ಎಂಬುದು ನಿಜ. ಆದರೆ, ಗುರಿ ಹತ್ತಿರವಂತೂ ಜಿಲ್ಲೆ ಬಂದು ನಿಂತಿದೆ. ನಿಗದಿತ ಗುರಿ ತಲುಪಲು ಕೇವಲ 2 ಸ್ಥಾನಗಳು ಕೊರತೆ ಉಂಟಾಗಿದೆ. ಇದು ಸಣ್ಣ ಸಾಧನೆಯಂತೂ ಅಲ್ಲ.
ಒಂದೇ ವರ್ಷದಲ್ಲೇ ದೊಡ್ಡ ಮಟ್ಟದ ಮುನ್ನಡೆಯಾಗಿದೆ. ಕಳೆದ ವರ್ಷಕ್ಕಿಂತ ಬರೋಬ್ಬರಿ 12 ಸ್ಥಾನ ಏರಿಕೆ ಕಂಡಿದೆ. ಇದರೊಂದಿಗೆ ರಾಜ್ಯ ಮಟ್ಟದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಮೈಸೂರು ಜಿಲ್ಲೆ ಶೈಕ್ಷಣಿಕ ತವರು ಎಂಬುದು ಮತ್ತೆ ಸಾಬೀತಾಗಿದೆ.
ಕಳೆದ ಬಾರಿಗಿಂತ ಈ ಸಲ ಶೇ.2.56ರಷ್ಟು ಫಲಿತಾಂಶ ಕಡಿಮೆ ಬಂದಿದೆ. ಆದರೆ, ರಾಜ್ಯಾದ್ಯಂತ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದ ಫಲವಾಗಿ ವಿವಿಧ ಜಿಲ್ಲೆಗಳ ಫಲಿತಾಂಶ ಕುಸಿದಿದೆ. ಇದು ಪರೋಕ್ಷವಾಗಿ ಮೈಸೂರು ಜಿಲ್ಲೆ ಪಟ್ಟಿಯಲ್ಲಿ ಮೇಲಕ್ಕೇರಲು ಅನುಕೂಲವಾಗಿದೆ.
ಕಳೆದ ಕೆಲ ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿ ಮುಜುಗರ ಅನುಭವಿಸಿತ್ತು. 2019-20ನೇ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶ ಶೇ.74.45ರಷ್ಟಿತ್ತು. 2020-21ನೇ ಸಾಲಿನಲ್ಲಿ ಕರೊನಾ ಕಾಲಕ್ಕೆ ಎಲ್ಲರನ್ನೂ ಪಾಸ್ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಫಲಿತಾಂಶವಾಗಿತ್ತು.
2021-22ನೇ ಸಾಲಿನಲ್ಲಿ ಶೇ.91.38, 2022-23ನೇ ಸಾಲಿನಲ್ಲಿ ಶೇ.89.75ರಷ್ಟು ರಿಸಲ್ಟ್ ಬಂದಿತ್ತು. ಕಳೆದ ಸಲ ರಾಜ್ಯ ಪಟ್ಟಿಯಲ್ಲಿ ಜಿಲ್ಲೆ 16ನೇ ಸ್ಥಾನ ಪಡೆದುಕೊಂಡಿತ್ತು. ಪಕ್ಕದ ಜಿಲ್ಲೆಗಳಾದ ಮಂಡ್ಯ 2ನೇ, ಹಾಸನ 3ನೇ, ಚಾಮರಾಜನಗರ 7ನೇ ಸ್ಥಾನ ಗಳಿಸಿದ್ದವು. ಅದಕ್ಕಿಂತ ಕಳಪೆ ಪ್ರದರ್ಶನವನ್ನು ಜಿಲ್ಲೆ ನೀಡಿತ್ತು. ಫಲಿತಾಂಶ ಸುಧಾರಣೆಗೆ ಕೈಗೊಂಡ ಕಾರ್ಯಕ್ರಮಗಳೆಲ್ಲ ಕೈಕೊಟ್ಟಿದ್ದವು. ಇದು ಚಿಂತೆಗೀಡು ಮಾಡುವಂತೆ ಮಾಡಿತ್ತು.
ಈ ಸಲ ಸಿಎಂ ನೀಡಿದ ಟಾಸ್ಕ್‌ನಿಂದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಜಾಗೃತಗೊಂಡರು. ಫಲಿತಾಂಶ ಹೆಚ್ಚಳ ಮಾಡಲೇಬೇಕಾದ ಒತ್ತಡಕ್ಕೂ ಸಿಲುಕಿಕೊಂಡರು. ಅದಕ್ಕಾಗಿ ಗುರಿ ಸಾಧನೆಗಾಗಿ ಕಾರ್ಯಪ್ರವೃತ್ತರಾಗಿ ವಿವಿಧ ಪ್ರಯೋಗಗಳಿಗೆ ತೆರೆದುಕೊಂಡರು. ವಿವಿಧ ಚಟುವಟಿಕೆಗಳು, ಕಾರ್ಯಕ್ರಮವನ್ನು ಕೈಗೊಂಡು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಉತ್ತೇಜನ ನೀಡಿದ್ದರು. ಇದು ಈಗ ಫಲ ಕೊಟ್ಟಿದೆ. ಸಿಎಂ ಅವರ ಕಠಿಣ ಕ್ರಮದ ತೂಗು ಕತ್ತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು, ಬಿಇಒಗಳು ತಪ್ಪಿಸಿಕೊಂಡು ನಿರಾಳರಾಗಿದ್ದಾರೆ.
ಈ ಬಾರಿಯ ‘ಪಾಸಿಂಗ್ ಪ್ಯಾಕೇಜ್’ ಹೊಸ ಸೂತ್ರ ಕೈಹಿಡಿದಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಕನಿಷ್ಠ 40 ಅಂಕ ಪಡೆದುಕೊಂಡು ಉತ್ತೀರ್ಣವಾಗಬೇಕು. ಅದಕ್ಕಾಗಿ ಪ್ರತಿ ವಿದ್ಯಾರ್ಥಿಯನ್ನೂ ತಯಾರಿಗೊಳಿಸಲಾಯಿತು. ಶಾಲೆಯಲ್ಲಿ 3 ಗುಂಪುಗಳಾಗಿ ವಿಂಗಡಣೆ ಮಾಡಿ ವಿಷಯವಾರು ಕಲಿಕಾ ಚಟುವಟಿಕೆ ನೀಡಲಾಯಿತು. ಕನಿಷ್ಠ 40 ಅಂಕ ಪಡೆಯುವ ಸಾಮರ್ಥ್ಯವೃದ್ಧಿಸುವ ಮೂಲಕ ಉತ್ತೀರ್ಣಗೊಳ್ಳುವಂತೆ ಮಾಡಲಾಯಿತು. ಇದುವೇ ಪಾಸಿಂಗ್ ಪ್ಯಾಕೇಜ್‌ನ ಉದ್ದೇಶವಾಗಿತ್ತು.
1 ಅಂಕ ಪ್ರಶ್ನೆ, 2 ಅಂಕ ಪ್ರಶ್ನೆ, 3 ಅಂಕ ಪ್ರಶ್ನೆ, 4 ಅಂಕ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು. ಅದರಲ್ಲಿ ಎಷ್ಟು ಅಂಕ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿ ಯಾವ ಅಂಕ ಕ್ಷೇತ್ರದಲ್ಲಿ ಹಿಂದುಳಿದಿದ್ದಾನೆ ಎಂಬುದನ್ನು ಪತ್ತೆ ಹಚ್ಚಿ ಪಾಸಾಗುವಂತೆ ತರಬೇತಿ ನೀಡುವ ಕೆಲಸವನ್ನೂ ಮಾಡಲಾಯಿತು. ಇದುವೇ ಫಲಿತಾಂಶ ಹೆಚ್ಚಳಕ್ಕೆ ದೊಡ್ಡ ಕಾಣಿಕೆ ಕೊಟ್ಟಿದೆ.
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಮೊದಲೇ ಗುರುತಿಸಲಾಯಿತು. ತ್ರೈಮಾಸಿಕ, ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ ಮಕ್ಕಳ ಮಾಹಿತಿ ಸಂಗ್ರಹಿಸಲಾಯಿತು. ಈ ಮೂಲಕ ಇವರು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬದನ್ನು ಪತ್ತೆ ಮಾಡಲಾಯಿತು.
ಕಲಿಕೆಯಲ್ಲಿ ಹಿನ್ನಡೆಯಾಗಲು ಕಾರಣವೇನು? ಅದಕ್ಕೆ ಏನು ಪರಿಹಾರ ಕಲ್ಪಿಸಬಹುದು? ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ವಿದ್ಯಾರ್ಥಿಗಳಿಗೆ ತಕ್ಕಂತೆ ಪಾಠ ಮಾಡಲಾಯಿತು. ಈ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಬೇಕಾದ ಸಾಮರ್ಥ್ಯ ಬರುವಂತೆ ಬೋಧನೆ ಮಾಡಲು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಗುರಿ ನೀಡಲಾಯಿತು. ಇದು ಮಕ್ಕಳ ಕಲಿಕಾ ಮಟ್ಟವನ್ನು ವೃದ್ಧಿಸಿತು.
ಫಲಿತಾಂಶ ವೃದ್ಧಿಗೆ ಅಳವಡಿಸಿಕೊಂಡ ವಿವಿಧ ಸೂತ್ರಗಳೂ ಯಶಸ್ವಿಯಾಗಿವೆ. ಮೊಬೈಲ್‌ಗೆ ಕಡಿವಾಣ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮಾಹಿತಿ ಕಲೆ ಹಾಕಿ ಅವರೆಡೆಗೆ ವಿಶೇಷ ಗಮನ, ಕೀಳರಿಮೆ- ಹಿಂಜರಿಕೆ ಹೊಂದಿರುವ ಮಕ್ಕಳಿಗೆ ಮನೋಸ್ಥೈರ್ಯ ತುಂಬುವುದು, ಮಗು ಯಾವ ವಿಷಯದಲ್ಲಿ ಹಿಂದುಳಿದಿದೆ ಎಂಬುದನ್ನು ಪತ್ತೆ ಹಚ್ಚಿ ಉತ್ತೀರ್ಣವಾಗಲು ತರಬೇತಿ, ಓದಿನೊಂದಿಗೆ ಬರೆದು ಅಭ್ಯಾಸಕ್ಕೆ ಉತ್ತೇಜನೆ, ಅನ್ಯ ಶಾಲೆಗಳ ಶಿಕ್ಷಕರನ್ನು ಕರೆಸಿ ಬೋಧನೆಗೆ ಅವಕಾಶ, ಪಾಲಕರ ಸಭೆ ನಡೆಸಿ ಮಕ್ಕಳ ಕಲಿಕೆಗೆ ಗಮನ ಹರಿಸುವಂತೆ ಸೂಚನೆ.
ಹೀಗೆ ಶಾಲಾ ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರಿಗೆ ನಿರ್ದಿಷ್ಟ ಕಾರ್ಯಸೂಚಿ ನೀಡಿ ಆ ಪ್ರಕಾರ ಕಾರ್ಯೋನ್ಮುಖವಾಗಿದ್ದರಿಂದ ಸಾಧನೆ ಸಾಧ್ಯವಾಯಿತು ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.
ಕಳೆದ ಬಾರಿ ಜಿಲ್ಲೆಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಕೆ.ಆರ್ ನಗರವು ಶೇ.79.28ರಿಂದ ಶೇ.89.48ರಷ್ಟು ಫಲಿತಾಂಶ ಹೆಚ್ಚಿಸಿಕೊಂಡಿದೆ. ಮೈಸೂರು ದಕ್ಷಿಣ ವಿಭಾಗವು ಶೇ.87.05ರಿಂದ ಶೇ.90.42ಕ್ಕೆ, ಮೈಸೂರು ಉತ್ತರ ವಿಭಾಗವು ಶೇ.82.80ರಿಂದ ಶೇ.84.68ರಷ್ಟು ಏರಿಕೆಯಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿದ ಟಾಸ್ಕ್ ಸಹ ಸಫಲವಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಫಲಿತಾಂಶ ಈ ಸಲ ಕುಸಿತ ಕಂಡಿದೆ.
ಸರ್ಕಾರಿ ಶಾಲೆ ಫಲಿತಾಂಶಕ್ಕಿಂತ (ಶೇ.83.19) ಖಾಸಗಿ ಶಾಲೆಗಳ ಫಲಿತಾಂಶ(ಶೇ.87.19) ಹೆಚ್ಚಿದೆ. ಇದರಲ್ಲಿ ಸಮತೋಲನ ತರಬೇಕಿದ್ದು, ಸರ್ಕಾರಿ ಶಾಲೆಗಳ ಫಲಿತಾಂಶ ಹೆಚ್ಚಳ, ಗುಣಮಟ್ಟ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರತಿಭಾವಂತರಾಗಿರುವ ಸರ್ಕಾರಿ ಶಾಲಾ ಶಿಕ್ಷಕರು ಇನ್ನಷ್ಟು ಶ್ರಮ ಹಾಕಬೇಕಿದೆ.
ಬಾಲಕ ಮತ್ತು ಬಾಲಕಿಯರ ನಡುವಿನ ಫಲಿತಾಂಶದಲ್ಲಿನ ವ್ಯತ್ಯಾಸ ಶೇ.9.58ರಷ್ಟಿದೆ. ಈ ಸಲವೂ ಬಾಲಕಿಯರು(ಶೇ.91.84) ಮೇಲುಗೈ ಸಾಧಿಸಿದ್ದಾರೆ. ಬಾಲಕರು (ಶೇ.82.26) ಹಿಂದೆ ಬಿದ್ದಿದ್ದಾರೆ. ಬಾಲಕರಲ್ಲೂ ಕಲಿಕೆಯಲ್ಲಿ ಸುಧಾರಣೆ, ಆಸಕ್ತಿ ಮೂಡಿಸಲು ವಿಶೇಷ ಕ್ರಮ ವಹಿಸಬೇಕಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮ ರೂಪಿಸಲಾಗಿತ್ತು. ಆದ್ದರಿಂದ ಉತ್ತಮ ಫಲಿತಾಂಶ ಬಂದಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವುದರೊಂದಿಗೆ ಇನ್ನಷ್ಟು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗುವುದು.ಎಚ್.ಕೆ. ಪಾಂಡು, ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ