

ತುಮಕೂರು: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆ ಉಳಿಸಿಕೊಳ್ಳುವುದು ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡಗೆ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ.
ಮದಲೂರು ಕೆರೆಗೆ ನಿರ್ಮಿಸಿರುವ ನಾಲೆಯಲ್ಲಿ ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಎಷ್ಟು ನೀರು ಬಿಟ್ಟರೂ ಕೆರೆ ತಲುಪುವುದು ಕಷ್ಟಸಾಧ್ಯವಾಗಿದ್ದು, ಪರ್ಯಾಯ ಯೋಚನೆೆ ಬಗ್ಗೆ ಮಾಧುಸ್ವಾಮಿ ಮೊದಲಿಂದಲೂ ವಾದಿಸುತ್ತಿದ್ದರೂ ಚುನಾವಣಾ ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಭರವಸೆ ನೀಡಿರುವುದು ಕುತೂಹಲ ಮೂಡಿಸಿದೆ.
ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಡಾ.ರಾಜೇಶ್‌ಗೌಡ, ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಈಗಾಗಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮದಲೂರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆನಾಲ್‌ಗಳಲ್ಲಿ ಜಂಗಲ್ ತೆರವುಗೊಳಿಸುವ ಕಾರ್ಯ ಮುಂದಿನ ವಾರದಿಂದ ಆರಂಭಗೊಳ್ಳಲಿದ್ದು 3 ತಿಂಗಳ ಒಳಗೆ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೇಮೆ ನೀರು ಹರಿಸುವ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಣ್ಣ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ, ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದು, ಭರವಸೆ ಈಡೇರಿಸಲು ಮುಂದಾಗುವಂತೆ ಸೂಚಿಸಿದ್ದಾರೆ ಎಂದರು.
ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, 2 ವರ್ಷಗಳ ಒಳಗೆ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ತಾಲೂಕಿನ 42 ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಶಿರಾ ಕ್ಷೇತ್ರದಲ್ಲಿ ರಸ್ತೆ, ಚರಂಡಿ ಸೇರಿ ಇತರ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸಲಹೆ, ಸಹಕಾರ, ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ. ಶಿರಾ ಕೋಟೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮವಹಿಸಿ, ಉತ್ತಮ ಪ್ರವಾಸಿ ತಾಣವನ್ನಾಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಡಾ.ರಾಜೇಶ್‌ಗೌಡ, ಶಾಸಕ, ಶಿರಾ