ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಏಕಾಗ್ರತೆ ಸಾಧಿಸುವುದೇ ಸವಾಲು

mysore
Published on

ಮೈಸೂರು: ಏಕಾಗ್ರತೆ ಸಾಧಿಸುವುದೇ ಇಂದಿನ ಸವಾಲು. ಮೊಬೈಲ್, ಸಾಮಾಜಿಕ ಜಾಲತಾಣವನ್ನು ಜಾಗರೂಕತೆಯಿಂದ ಬಳಸಬೇಕು. ಏಕಾಗ್ರತೆ ಕಳೆದುಕೊಳ್ಳಬಾರದು ಎಂದು ಐಎಎಸ್ ಅಧಿಕಾರಿ, ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಸಲಹೆ ನೀಡಿದರು.


ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 50 ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಎಲ್ಲ ಹುದ್ದೆಗಳ ಮೂಲ ಉದ್ದೇಶ ಸೇವೆಯೇ ಎಂದು ಹೇಳಿದರು.


ಬೀದರ್‌ನ ಬಡ ಕುಟುಂಬದವನಾದ ನಮ್ಮ ಮನೆ ಸಮೀಪ ಆರಕ್ಷಕ ಠಾಣೆ ಇತ್ತು. ಅಲ್ಲಿನ ಅಧಿಕಾರಿಗಳನ್ನು ನಿತ್ಯ ನೋಡುತ್ತಿದ್ದ ನನಗೆ ನಾನೇಕೆ ಹಾಗಾಗಬಾರದು ಎನಿಸಿತು. ಅಂದಿನಿಂದ ಅದಕ್ಕೆ ಏನು ಮಾಡಬೇಕೆಂದು ಹುಡುಕಿ ನಿರಂತರವಾಗಿ ಓದಿದೆ. ಚಿಕ್ಕ ವಯಸ್ಸಿನಲ್ಲಿಯೇ ಐಎಎಸ್ ತೇರ್ಗಡೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೀಗೆ ಜೀವನದಲ್ಲಿ ಛಲವನ್ನು ರೂಢಿಸಿಕೊಳ್ಳಬೇಕು ಎಂದರು.


ಶಿಸ್ತು ಸಾಧನೆಗೆ ಬಹುಮುಖ್ಯ, ಯಾವ ಹಂತದ ಪರೀಕ್ಷೆಯಾದರೂ ಓದಿನಲ್ಲಿ ತಲ್ಲೀನತೆ ಇರಬೇಕು ಎಂದರು.


ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಶಿಬಿರಾರ್ಥಿಗಳು ಸಫಲರಾಗಬೇಕಾದರೆ ಶ್ರಮವೊಂದೇ ಅದಕ್ಕಿರುವ ದಾರಿ ಎಂದು ಅಭಿಪ್ರಾಯಪಟ್ಟರು.


ಪ್ರತಿಯೊಬ್ಬ ಸ್ಪರ್ಧಾತ್ಮಕ ಶಿಬಿರಾರ್ಥಿ ಇತರರಿಗಿಂತ ಭಿನ್ನವಾಗಿ ನಾವು ಹೇಗೆ ಮುಂದೆ ಬರಬೇಕು, ಹೇಗೆ ಸಫಲರಾಗಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಜ್ಞಾನ, ಕೌಶಲ, ನಡತೆಯನ್ನು ಪರಿಪಕ್ವತೆ ಮಾಡಿಕೊಳ್ಳಬೇಕು. ಕಷ್ಟಪಟ್ಟು ನಿರಂತರವಾಗಿ ಓದುವುದರಿಂದ ಉನ್ನತ ಮಟ್ಟದ ಹಾದಿ ಸುಲಭವಾಗುತ್ತದೆ ಎಂದರು.


ನಾನು ಸಹ ವಿದ್ಯಾರ್ಥಿ ದಿಸೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದವನು. ಆದರೆ ನಂತರದಲ್ಲಿ ಸಾಮಾನ್ಯರೇ ಹೆಚ್ಚು ಸಾಧನೆ ಮಾಡಿರುವುದನ್ನು ಕಂಡು ಓದಿನಲ್ಲಿ ನಿರತನಾದೆ. ಆಗುವುದಿಲ್ಲ ಎಂಬ ಮನೋಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.


ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿಂದ ಮಾಡಿ ಸತತ ಪ್ರಯತ್ನ ಪಡುವುದೇ ಕಾಯಕವೇ ಕೈಲಾಸ ಎಂದರು.


ಕುಲಸಚಿವ ಪ್ರೊ. ಕೆಎಲ್‌ಎನ್ ಮೂರ್ತಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ.ಪ್ರವೀಣ, ಅಧ್ಯಯನ ಡೀನ್ ಪ್ರೊ.ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net