ಕಾರ್ಮಿಕರ ಹಕ್ಕು ಕಸಿಯುತ್ತಿದೆ ಕೇಂದ್ರ ಸರ್ಕಾರ

2
ದೊಡ್ಡಬಳ್ಳಾಪುರದ ಕನ್ನಡ ಜಾಗೃತಿ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಕೆಐಇಇಎಫ್ ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಎಐಯುಟಿಯುಸಿ ಮುಖಂಡ ಶ್ರೀಕಾಂತ್, ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ.ಸಿ, ಉಪಾಧ್ಯಕ್ಷ ಪಿ.ಎ.ವೆಂಕಟೇಶ, ಜಿಲ್ಲಾ ಖಜಾಂಚಿ ಮೋಹನ್ ಬಾಬು, ಹಿಮತ್ ಸಿಂಗ್ ಕಾರ್ಮಿಕ ಸಂಘದ ಮುಖಂಡ ಆರ್.ರಮೇಶ, ಕಾರ್ಮಿಕ ಮುಖಂಡ ಪ್ರಭಾಕರ್, ಬಿರ್ಲಾ ಸೂಪರ್ ಕಾರ್ಮಿಕ ಸಂಘದ ಮುಖಂಡ ರೇಣುಕಾ ಆರಾಧ್ಯ, ಅಂಗನವಾಡಿ ನೌಕರರ ಸಂಘದ ಮಹಿಳಾ ಮುಖಂಡ ಎಲ್‌ಆರ್.ನಳೀನಾಕ್ಷಿ ಇದ್ದರು.
Published on

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಕಿಡಿ- ದೊಡ್ಡಬಳ್ಳಾಪುರದಲ್ಲಿ ವಿವಿಧ ಸಂಘಟನೆಗಳ ಜಿಲ್ಲಾ ಸಮಾವೇಶ

ದೊಡ್ಡಬಳ್ಳಾಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಸಿಕೊಂಡು ಇಡೀ ಕಾರ್ಮಿಕರನ್ನು ಬಂಡವಾಳಶಾಹಿಗಳ ಪಾದದಡಿಗೆ ಒಪ್ಪಿಸಿ, ಗುಲಾಮಗಿರಿ ಪೋಷಿಸಲು ಹೊರಟಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಆರೋಪಿಸಿದರು.

ನಗರದ ಕನ್ನಡ ಜಾಗೃತಿ ಭವನದಲ್ಲಿ ಭಾನುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ‘ನಾಲ್ಕು ಲೇಬರ್ ಕೋಡ್‌ಗಳ ಜಾರಿ ನಿಲ್ಲಿಸಿ, ದುಡಿಯುವ ಜನತೆಯ ಸ್ವಾಯತ್ತತೆ ಕೆಣಕದಿರಿ’ ಎಂಬ ಘೋಷವಾಕ್ಯದಡಿ ಮೇ 20ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಪ್ರಯುಕ್ತ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಸೇವಕರನ್ನಾಗಿಸಲು 29 ಕಾರ್ಮಿಕ ಕಾನೂನು, ವೇತನ ಸಂಹಿತೆಯಲ್ಲಿ 4 ಕಾನೂನು, ಕೈಗಾರಿಕಾ ಭಾಂದವ್ಯ ಸಂಹಿತೆಯಲ್ಲಿ 3 ಕಾನೂನು ತಿದ್ದುಪಡಿ ಮಾಡಲಾಗಿದೆ. ದೇಶದಲ್ಲಿ ಅತಿಹೆಚ್ಚು ಅಸಂಘಟಿತ, ಸ್ವೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿ ತರಬೇಕು ಮತ್ತು ಒಂದು ದಿನದ ವೇತನ 600 ರೂ. ನಿಗದಿ ಮಾಡಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ವೇತನ ಸಂಹಿತೆಯಲ್ಲಿ ಕನಿಷ್ಠ ವೇತನ, ನ್ಯಾಯ ಸಮ್ಮತ ಮತ್ತು ಜೀವಿತ ವೇತನ ನಿಗದಿ ಮಾಡುವ ಅಂಶ ಒಳಗೊಳ್ಳುವ ಬದಲಿಗೆ 187 ರೂ. ನೆಲದ ಕೂಲಿ ನಿರ್ದಿಷ್ಟಗೊಳಿಸಿದ್ದರಿಂದ ಇನ್ಮುಂದೆ ವೇತನ ಹೆಚ್ಚಳಕ್ಕೆ ಪೆಟ್ಟು ಬೀಳುತ್ತದೆ ಎಂದರು. ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕಾರ್ಮಿಕರ ಸಾಮೂಹಿಕ ಭದ್ರತೆಯ ಭಾಗವಾಗಿ ನಿವೃತ್ತಿಯಾದ ಕಾರ್ಮಿಕರಿಗೆ ಕನಿಷ್ಠ 9,000 ರೂ. ನಿವೃತ್ತಿ ವೇತನ ನೀಡುವ ಬದಲಿಗೆ ಇಲಾಖೆ ಮತ್ತು ಕಾರ್ಮಿಕನ ಆಯ್ಕೆಯ ಸ್ವಾತಂತ್ರ್ಯವನ್ನು ಮಾಲೀಕರಿಗೆ ನೀಡಿ, ನಿಧಿಗಳ ನಿರ್ವಹಣೆಯ ಅಧಿಕಾರ ಕಾಯಾರ್ಂಗಕ್ಕೆ ನೀಡಿದೆ. ಗುತ್ತಿಗೆ ಕಾರ್ಮಿಕರ, ಕಟ್ಟಡ ಕಾರ್ಮಿಕರ ಕನಿಷ್ಠ ವೇತನದ ಎಲ್ಲ ತ್ರಿಪಕ್ಷೀಯ ಸಮಿತಿಗಳನ್ನು ರದ್ದುಗೊಳಿಸುವ ಅಥವಾ ಅದರ ಪ್ರಾಮುಖ್ಯತೆ ಇಲ್ಲದಾಗಿಸಿ ಮಾಲೀಕರಿಗೆ ಅಧಿಕಾರ ನೀಡಿ, ಕಾರ್ಮಿಕರನ್ನು ಪ್ರತಿನಿಧಿಸುವ ಎಲ್ಲ ವ್ಯವಸ್ಥೆಗಳಿಗೆ ತಿಲಾಂಜಲಿ ನೀಡಲಾಗುತ್ತಿದೆ. ಕಾರ್ಮಿಕ ಒಡಂಬಡಿಕೆಗಳಿಗೂ ಇತಿಶ್ರೀ ನೀಡಿ ಕಾರ್ಮಿಕರನ್ನು ಕಡೆಗಣಿಸುವ ಮೂಲಕ ಮೋದಿ ಸರ್ಕಾರ ಸರ್ವಾಧಿಕಾರತನ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಶಾ ಕಾರ್ಯಕರ್ತರ ಸಂಘದ ಮಹಿಳಾ ಮುಖಂಡರಾದ ಶಾಂತಮ್ಮ, ಎಆರ್‌ಡಿಯು ಸಂಘದ ಮುಖಂಡ ಸಾಧಿಕ್ ಪಾಷಾ, ಕಾರ್ಮಿಕ ಮುಖಂಡ ಅನಿಲ್ ಗುಪ್ತ, ಎಲ್‌ಸಿ.ಸುಮಾ, ಪಿಕೆ.ವೆಂಕಟೇಶ್, ನೇಕಾರರ ಮುಖಂಡ ಎಂ.ಚೌಡಯ್ಯ ಪಾಲ್ಗೊಂಡಿದ್ದರು.

ಓವರ್‌ಟೈಮ್ ಕೆಲಸದಿಂದ ಕಾರ್ಮಿಕರಿಗೆ ಅನಾರೋಗ್ಯ

ಕಾರ್ಮಿಕರ ವೆಚ್ಚ ಉಳಿಸಲು, ಶತಮಾನದ ಹೋರಾಟಗಳ ತ್ಯಾಗ-ಬಲಿದಾನಗಳ ಮೂಲಕ ಬಂದಿರುವ 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ಓವರ್ ಟೈಮ್ (ಒಟಿ) ಅನ್ನು 3 ತಿಂಗಳಿಗೆ 50 ಗಂಟೆ ಇದ್ದುದ್ದು, ಈಗ 125 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಲು ಈ ಸಂಹಿತೆಗಳಲ್ಲಿ ತಿದ್ದುಪಡಿ ತರಲಾಗಿದೆ. ಇದರಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳಲಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಕಾರ್ಮಿಕರು ಹೃದಯ ಸಂಬಂಧಿ, ಪಾರ್ಶ್ವವಾಯು, ಮಾನಸಿಕ ಖಿನ್ನತೆಯಂತಹ ಕಾಯಿಲೆಗಳು ಹೆಚ್ಚಾಗುತ್ತಿದೆ ಎಂದು ವರಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net