ಕೇಂದ್ರ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ; ಸಚಿವ ರಹೀಂಖಾನ್

RAHIMKHAN
Published on

ವಿಜಯಪುರ: ವಕ್ಫ್ ಆಸ್ತಿ ಸರ್ಕಾರದ್ದಲ್ಲ; ಮುಸ್ಲಿಂ ಸಮುದಾಯದಲ್ಲಿ ದಾನ ಮಾಡಿದ ಆಸ್ತಿ ಆಗಿದ್ದು ಕೇಂದ್ರ ಸರ್ಕಾರ ಅನವಶ್ಯಕವಾಗಿ ಮಧ್ಯ ಪ್ರವೇಶಿಸುತ್ತಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಪ್ರತಿಕ್ರಿಯಿಸಿದರು.

ವಕ್ಫ್ ಆಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಒಡೆದಾಳಲು ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರದ ನಡೆ ಸರಿಯಾಗಿಲ್ಲ. ನೂತನ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಹಜ್ ಯಾತ್ರೆಯ ಹಣ ದುರುಪಯೋಗ ಆಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಹಜ್ ಯಾತ್ರೆಗೆ ಸಬ್ಸಿಡಿ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರದಲ್ಲಿ ಈ ಸಬ್ಸಿಡಿ ಹಣ ನೀಡುತ್ತಿಲ್ಲ ಎಂದರು.

ಇನ್ನು ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿನ ಬದಲಾವಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸ್ಥಾನ ಬದಲಾವಣೆ ಕುರಿತು ನನ್ನೊಂದಿಗೆ ಯಾರು ಚರ್ಚೆ ಮಾಡಿಲ್ಲ. ಇದೆಲ್ಲ ಸುಳ್ಳು ಎಂದರು.

ನಮ್ಮಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಮಾಧ್ಯಮಗಳೇ ನಿರ್ಧಾರ ತೆಗೆದುಕೊಂಡರೆ ಹೈಕಮಾಂಡ್ ಏಕೆ? ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಐವರು ಸಂಸದರನ್ನು ನಾವು ಗೆಲ್ಲಿಸಿಕೊಟ್ಟಿದ್ದೇವೆ. ಅಲ್ಪಸಂಖ್ಯಾತರು ಹಾಗೂ ದಲಿತರು ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇವೆ. ಬೀದರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ತಂದಿದ್ದೇವೆ. ಕೇಂದ್ರ ಸಚಿವರ ವಿರುದ್ಧ ಈ ಅಂತರದ ಗೆಲುವು ಪಡೆದಿದ್ದೇವೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾನೊಬ್ಬನೇ ಮುಸ್ಲಿಂ ಸಚಿವ. ಉತ್ತಮವಾಗಿ ಕೆಲಸ ಮಾಡುತ್ತಿದ್ದೇಣೆ. ಹೀಗಾಗಿ ಬದಲಾವಣೆ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net