

ಮೈಸೂರು: 2014ರ ನಂತರ ದೇಶವು ನಿರಂಕುಶತ್ವ, ಸರ್ವಾಧಿಕಾರಿ ಆಡಳಿತದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಕಳವಳ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ.ಮಲ್ಲೇಶ್; 90 ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು’ ಕುರಿತು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು
ಸಂಘ ಪರಿವಾರದ ಸಿದ್ಧಾಂತದ ಆಧಾರ ಮೇಲೆಯೇ ದೇಶವನ್ನು ನಿರ್ಮಿಸಲಾಗುತ್ತಿದೆ. ಶಾಲೆಗಳಿಗಿಂತ ಪ್ರತಿಮೆಗಳು ಮುಖ್ಯವಾಗಿವೆಯ ಹೊರತು, ವೈಚಾರಿಕತೆ, ವಿಜ್ಞಾನಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ರೈತರನ್ನು ಶತ್ರುಗಳಂತೆ ನೋಡಲಾಗಿದೆ. ಅದಾನಿ ತಯಾರಿಸುವ ಡ್ರೋನ್‌ಗಳು ಇಸ್ರೇಲ್ ಮೂಲಕ ದೇಶದ ಹೋರಾಟನಿರತ ರೈತರ ವಿರುದ್ಧವಾಗಿಯೇ ಬಳಕೆಯಾಗಿವೆ. ಮೊಳೆಗಳು, ತಂತಿಬೇಲಿ, ಗೋಡೆಗಳನ್ನು ನಿರ್ಮಿಸಿ ರೈತ ಹೋರಾಟವನ್ನು ದಮನ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರವು ಎಲ್ಲ ಸಮುದಾಯಗಳ ವಿರುದ್ಧವೂ ಯುದ್ಧ ಘೋಷಿಸಿದೆ. ಜನ ಚಳವಳಿಗಳನ್ನು ನಾಶ ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡುತ್ತಿದೆ ಎಂದು ದೂರಿದರು.