ಕೇಂದ್ರ ಸರ್ಕಾರ ನಮ್ಮ ಕೈಕಟ್ಟಿ ಹಾಕಿದೆ

KRISHNE BAIREGOWDA (1)
Published on

ಚಿತ್ರದುರ್ಗ: ಬರ ಘೋಷಣೆ ಸಂಬಂಧ ರಾಜ್ಯದ ಜನರಿಗೆ ಸಮರ್ಥವಾಗಿ ನ್ಯಾಯ ನೀಡಲು ಕೇಂದ್ರ ಸರ್ಕಾರದ ಮಾನದಂಡ ಕೈಕಟ್ಟಿ ಹಾಕಿದಂತಾಗಿದೆ. ಹೀಗಾಗಿ ತಡವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ನಿರೀಕ್ಷೆಯಂತೆ ಬರ ಘೋಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾನದಂಡ ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದರು.

ಪ್ರಸ್ತುತ ಕೇಂದ್ರದ ಮಾರ್ಗಸೂಚಿಯಂತೆ ಸೆ.2ಕ್ಕೆ 83 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ. ಮಳೆ ಕೊರತೆ ಉಂಟಾಗಿ ತೊಂದರೆಯಾದ ಎಲ್ಲ ತಾಲೂಕುಗಳಿಗೂ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಉದ್ದೇಶ. ಈ ವಿಚಾರವಾಗಿ ಕೇಂದ್ರ ಸರ್ಕಾರ ಕೂಡ ಸ್ಪಂದಿಸಬೇಕಿದೆ ಎಂದು ಹೇಳಿದರು.

ಮೇವು ಸೇರಿ ಬರ ನಿರ್ವಹಣೆಗೆ ಕೊರತೆ ಉಂಟಾಗಬಾರದು ಎಂಬ ಉದ್ದೇಶಕ್ಕಾಗಿ ಮೊದಲ ಹಂತವಾಗಿ 529 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಆಯಾ ಜಿಲ್ಲಾಧಿಕಾರಿಗೆ ವರ್ಗಾಯಿಸಲಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ 150 ಕಾಮಗಾರಿ ಕೈಗೊಂಡು ಉದ್ಯೋಗ ನೀಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net