

ಶಿವಮೊಗ್ಗ: ಮತಗಳ್ಳತನದ ಮೂಲಕ ಬಿಜೆಪಿ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿದೆ. ಕೇಂದ್ರ ಚುನಾವಣಾ ಆಯೋಗ ಕೂಡ ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಆರೋಪಿಸಿದರು.
ಕಾಂಗ್ರೆಸ್‌ನಿಂದ ಆರಂಭಿಸಿರುವ ವೋಟ್ ಚೋರ್ ಅಭಿಯಾನದ ಭಾಗವಾಗಿ ಶನಿವಾರ ಸಹಿ ಸಂಗ್ರಹ ಅಭಿಯಾನ, ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮತಗಳ್ಳತನದ ಕಾರಣದಿಂದಲೇ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರು ಎಂದು ದೂರಿದರು.
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೇ 1.6 ಲಕ್ಷ ಮತಗಳ ಕಳ್ಳತನವಾಗಿದೆ ಎನ್ನಲಾಗಿದೆ. ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ರಾಹುಲ್ ಗಾಂಧಿ ಆರು ತಿಂಗಳು ಮಾಹಿತಿ ಸಂಗ್ರಹಿಸಿ ಮತಗಳ್ಳತನದ ಬಗ್ಗೆ ಮಾತನಾಡಿದ್ದಾರೆ. ಆ ಕ್ಷೇತ್ರದಲ್ಲಿ ನಾಲ್ಕು ಸಾವಿರ ಮತದಾರರಿಗೆ ವಿಳಾಸ ಮತ್ತು ಗುರುತಿನಪತ್ರ ಇರಲಿಲ್ಲ. ಕೇಂದ್ರ ಚುನಾವಣಾ ಆಯೋಗದ ನೆರವಿನೊಂದಿಗೆ ಬಿಜೆಪಿ ಮೋಸದ ಚುನಾವಣೆ ನಡೆಸಿದೆ ಎಂದು ತಿಳಿಸಿದರು.
ಬಿಹಾರದಲ್ಲಿ 65 ಲಕ್ಷ ಮತ ಕೈಬಿಡಲಾಗಿದೆ. ಹರಿಯಾಣದಲ್ಲೂ ಭಾರಿ ಪ್ರಮಾಣದ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಆ ಜಾಗಕ್ಕೆ ಬಿಜೆಪಿ ಪರ ಮತದಾರರನ್ನು ಸೇರಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕಿದ್ದ ಕಡೆಗಳಲ್ಲಿ ಗೆಲುವಿನ ಅಂತರ ಒಂದೂವರೆ ಲಕ್ಷಕ್ಕೆ ಕುಸಿದಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಸ್ಸಿ, ಎಸ್ಟಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಹಿಂದುಳಿದ ವಿಭಾಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಕಲೀಂ ಪಾಶಾ, ಸಿ.ಎಸ್.ಚಂದ್ರಭೂಪಾಲ್, ಎನ್.ರಮೇಶ್, ಎಚ್.ಸಿ.ಯೋಗೇಶ್ ಇತರರಿದ್ದರು.