

ಬೆಂಗಳೂರು: ಮಹಾನಗರದ ಐದೂ ಪಾಲಿಕೆಗಳ ಪೈಕಿ ಕೇಂದ್ರ ನಗರ ಪಾಲಿಕೆಯಲ್ಲಿ ಹೆಚ್ಚಿನ ರಸ್ತೆಗುಂಡಿಗಳು ಉಂಟಾಗಿರುವ ಹಿನ್ನೆಲೆ, ಸೋಮವಾರ ಮಧ್ಯರಾತ್ರಿ ಹಲವು ರಸ್ತೆಗಳಲ್ಲಿ ಗುಂಡಿ ಮುಚ್ಚುವ ಜತೆಗೆ ಬ್ಲ್ಯಾಕ್ ಟಾಪಿಂಗ್ ಕೆಲಸವನ್ನು ಕೈಗೊಳ್ಳಲಾಯಿತು.
ವಿಧಾನಸೌಧ-ವಿಕಾಸಸೌಧ, ಹೈಕೋರ್ಟ್, ಜಿಬಿಎ ಕಚೇರಿ ಸೇರಿದಂತೆ ಸರ್ಕಾರದ ಕಚೇರಿಗಳು ಹಾಗೂ ಪ್ರಮುಖ ವಾಣಿಜ್ಯ ಸಂಸ್ಥೆಗಳ ತಾಣವಾಗಿರುವ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನ ಹಾಗೂ ವಾಹನ ಸಂಚಾರದ ಒತ್ತಡ ಇದೆ. ಇದರಿಂದ ರಸ್ತೆ ಸುಧಾರಣೆ ಸವಾಲಾಗಿದ್ದು, ದಟ್ಟಣೆ ವೇಳೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ರಾತ್ರ ವೇಳೆ ದುರಸ್ತಿ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದು, ಸೋಮವಾರ ಮಧ್ಯರಾತ್ರಿ 2 ಗಂಟೆವರೆಗೂ ಹಲವೆಡೆ ಗುಂಡಿ ಮುಚ್ಚುವಲ್ಲಿ ಕಾರ್ಪೊರೇಷನ್ ಸಿಬ್ಬಂದಿ ನಿರತರಾಗಿದ್ದರು.
ಬ್ರಿಗೇಡ್ ರಸ್ತೆ, ಮಿಷನ್ ರಸ್ತೆ, ಕಮಿಷನರೇಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಜಾನ್ ಚರ್ಚ್ ಸ್ಟ್ರೀಟ್‌ಗಳಲ್ಲಿ ಉಂಟಾಗಿದ್ದ 100ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ. ಸ್ಯಾಂಕಿ ರಸ್ತೆಯಲ್ಲಿ ಬ್ಲ್ಯಾಕ್ ಟಾಪಿಂಗ್ (ರಸ್ತೆಯ ಮೇಲ್ಪದರಕ್ಕೆ ಡಾಂಬರು ಹಾಕುವುದು) ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಮಾರ್ಗದಲ್ಲಿ ಸಿಎಂ ಅಧಿಕೃತ ನಿವಾಸವಿದ್ದು, ವಿಂಡ್ಸರ್ ಮ್ಯಾನರ್ ವೃತ್ತದ ಬಳಿ ಹಲವು ಗುಂಡಿಗಳುಂಟಾಗಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹಾಗಾಗಿ ವಿಂಡ್ಸರ್ ಮ್ಯಾನರ್ ವೃತ್ತದಿಂದ ಬಿಡಿಎ ಕಚೇರಿಯ ಬಳಿಯಿರುವ ಕಿರು ಸೇತುವೆವರೆಗೂಹಿಂದೆ ಹಾಕಿದ್ದ ಡಾಂಬರನ್ನು ಯಂತ್ರದಿಂದ ತೆಗೆದು ಹೊಸದಾಗಿ ಬ್ಲ್ಯಾಕ್ ಟಾಪಿಂಗ್ ಮಾಡಲಾಗುತ್ತಿದೆ. ಈ ದುರಸ್ತಿ ಕಾರ್ಯದಿಂದಾಗಿ ಮಧ್ಯರಾತ್ರಿ ವೇಳೆ ಏರ್‌ಪೋರ್ಟ್‌ಗೆ ತೆರಳಲು ಹಾಗೂ ವಾಪಸಾಗುವವರು ಟ್ರಾಫಿಕ್‌ನಲ್ಲಿ ಸಿಲುಕಬೇಕಾಯಿತು.
ಈ ವಾರವಿಡೀ ನಗರದ ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ವ್ಯಾಪ್ತಿಯ ಎಲ್ಲೆಡೆ ರಸ್ತೆಗುಂಡಿ ಮುಚ್ಚಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ದುರಸ್ತಿ ಕಾರ್ಯ ಈ ವಾರಾಂತ್ಯದವರೆಗೂ ಮುಂದುವರಿಯಲಿದೆ ಎಂದು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿಗೆ ವೇಗ ನೀಡಿ:
ಕೇಂದ್ರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಕೈಗೊಳ್ಳುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ವೇಗ ನೀಡಿ ಪೂರ್ಣಗೊಳಿಸುವಂತೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದ್ದಾರೆ.
ನಾರಾಯಣ ಪಿಳೈ ರಸ್ತೆ, ಹಳೆಯ ಪೋಸ್ಟ್ ಆಫೀಸ್ ರಸ್ತೆ ಸೇರಿ ಕಾಮಗಾರಿ ನಡೆಯುತ್ತಿರುವ ಕೆಲ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಮಾತನಾಡಿದ ಅವರು, ವೈಟ್ ಟಾಪಿಂಗ್ ಕೆಲಸ ನಡೆಯುತ್ತಿರುವ ಕಡೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಜತೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿ ತ್ವರಿತಗೊಳಿಸಲು ತಿಳಿವಳಿಕೆ ನೀಡಲಾಗಿದೆ ಎಂದರು.
ಕೆ.ಆರ್. ವೃತ್ತದಲ್ಲಿ ಕೆಲವೆಡೆ ರಸ್ತೆ ಮೇಲ್ಮೈ ಹಾಳಾಗಿದ್ದು, ಅಲ್ಲಿ ಆದ್ಯತೆ ಮೇಲೆ ದುರಸ್ತಿ ನಡೆಸಲಾಗುವುದು. ರೇಸ್ ಕೋರ್ಸ್ ರಸ್ತೆಯಲ್ಲಿ ರಸ್ತೆ ಗುಂಡಿ ಹಾಗೂ ಪ್ಯಾಚ್‌ವರ್ಕ್ ಅನ್ನು 2 ದಿನದೊಳಗೆ ಪೂರ್ಣಗೊಳಿಸಲಾಗುವುದು. ಶಿವಾನಂದ ವೃತ್ತದಲ್ಲಿ ಈಗಾಗಲೇ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಸರ್ವೀಸ್ ರಸ್ತೆಯ ಪ್ಯಾಚ್ ವರ್ಕ್ ಬಾಕಿ ಇದೆ ಎಂದು ತಿಳಿಸಿದರು.
ಈ ವೇಳೆ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಯೋಜನಾ ವಿಭಾಗ (ಸಮನ್ವಯ)ದ ಅಧೀಕ್ಷಕ ಅಭಿಯಂತರ ಹೇಮಲತಾ, ಬೆಸ್ಕಾ, ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.
ವಾರಾಂತ್ಯಕ್ಕೆ ಡಿಸಿಎಂ ಪರಾಮರ್ಶೆ:
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಪಾಲಿಕೆಗಳು ಕೈಗೊಂಡಿರುವ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ಬಗ್ಗೆ ಪರಾಮರ್ಶನಾ ಸಭೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಾರಾಂತ್ಯದಲ್ಲಿ ನಡೆಸಲಿದ್ದಾರೆ. ಆ ವೇಳೆಗೆ ಹೆಚ್ಚಿನ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದು, ಯಾವುದೇ ಸಮಸ್ಯೆ ಇದ್ದಲ್ಲಿ ಜಿಬಿಎ ಮುಖ್ಯಸ್ಥರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ.
ಪ್ರಸ್ತುತ ನಿತ್ಯವೂ ಐದೂ ಪಾಲಿಕೆಗಳು ಕನಿಷ್ಠ ತಲಾ 200ರಂತೆ ಒಟ್ಟು 1,000 ರಸ್ತೆಗುಂಡಿಗಳನ್ನು ಮುಚ್ಚುವಂತೆ ನಿರ್ದೇಶನ ನೀಡಲಾಗಿದೆ. ಮಳೆ ಬಂದರೂ ದುರಸ್ತಿ ಕಾರ್ಯ ನಿಲ್ಲಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆಗುಂಡಿ ಮುಚ್ಚಲು ಅನುದಾನದ ಕೊರತೆ ಇಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ.