

ವಿಜಯಪುರ: ಕೇಂದ್ರ ಸರ್ಕಾರ ರೈತ ಕಾರ್ಮಿಕರ ಕಾನೂನುಗಳನ್ನು ಮೊಟಕುಗೊಳಿಸುವ ಹಾಗೂ ಅವರ ದುಡಿಮೆಯ ಪಾಲು ದೋಚುವುದಕ್ಕೆ ತಂತ್ರಗಾರಿಕೆ ಹೆಣೆಯುತ್ತಿದೆ ಎಂದು ಸಿಪಿಐಎಂ ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಆರೋಪಿಸಿದರು.
ನಗರದ ಸಹಕಾರಿ ಯೂನಿಯನ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿಪಿಐಎಂ ಜಿಲ್ಲಾ 22ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕೋಮು ಪ್ರಚೋದಕ ವಿಭಜನಕಾರಿ ದ್ವೇಷದ ವಾತಾವರಣ ಸೃಷ್ಟಿಸುತ್ತದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹೆಸರನ್ನು ಎತ್ತಲು ಹೆದರುತ್ತಿದ್ದ ಬಿಜೆಪಿ ಸರ್ಕಾರ ಸದ್ಯ ಬಹಿರಂಗವಾಗಿ ಅವರನ್ನು ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದೆ ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಮಾತನಾಡಿ, ಜಿಲ್ಲೆಯ ರಾಜಕೀಯ, ಸಮಾಜದ ಪರಿಸ್ಥಿತಿ ಮತ್ತು ರೈತರ ಸಮಸ್ಯೆ, ಕುಟುಂಬ ರಾಜಕಾರಣ ಮತ್ತು ಕರಡು ವರದಿ ಮಂಡಿಸಿದರು. ಅಲ್ಲದೆ, ಬಗರ ಹುಕುಂ ಸಾಗುವಳಿ, ದಾರಿಯ ಹಕ್ಕು, ನರೇಗಾ ಜಾರಿ, ಕಾರ್ಮಿಕರ ಕನಿಷ್ಠ ವೇತನ 26 ಸಾವಿರ ರೂ., ತೊಗರಿ ಬೆಳೆ ನಷ್ಟ ಪರಿಹಾರ, 1 ಟನ್ ಕಬ್ಬಿಗೆ 5500 ರೂ. ನೀಡುವುದು ಹಾಗೂ ಶಾಶ್ವತ ಬರಗಾಲ ಜಿಲ್ಲೆ ಎಂದು ಘೋಷಿಸುವುದು, ಆಲಮಟ್ಟಿ ಪಟ್ಟಣದಿಂದ ಶಹಾಬಾದವರೆಗೆ ರೈಲು ಮಾರ್ಗ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಂಬರುವ ದಿನಗಳಲ್ಲಿ ಹೋರಾಟ ರೂಪಿಸಲು ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯ ಕಾರ್ಯದರ್ಶಿ ಜಿ. ನಾಗರಾಜ, 70 ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರರಿದ್ದರು. ರಾಜ್ಯ ಸಮಿತಿ ಸೂಚನೆ ಮೇರೆಗೆ 13 ಜನರ ನೂತನ ಸಮಿತಿ ರಚಿಸಲಾಯಿತು. ಲಕ್ಷ್ಮಣ ಹಂದ್ರಾಳ ಸ್ವಾಗತಿಸಿ, ನಿರೂಪಿಸಿದರು. ಸುರೇಖಾ ರಜಪೂತ ವಂದಿಸಿದರು.