ಮಿಲ್ಲಿಂಗ್​ ಕೊಬ್ಬರಿ ಖರೀದಿ ಮಿತಿ ಹೆಚ್ಚಿಸಿದ ಕೇಂದ್ರ

Published on

ತುಮಕೂರು: ಮಿಲ್ಲಿಂಗ್​ ಕೊಬ್ಬರಿ ಖರೀದಿಯಲ್ಲಿ ಅತಿ ಹೆಚ್ಚು ಕೊಬ್ಬರಿ ಉತ್ಪಾದಿಸುವ ತುಮಕೂರು ಜಿಲ್ಲೆಗೆ ಆಗಿದ್ದ ಅನ್ಯಾಯ ಸರಿಪಡಿಸುವ ಕೆಲಸವಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಮಿಲ್ಲಿಂಗ್​ ಕೊಬ್ಬರಿ ಖರೀದಿಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಖರೀದಿ ಮಿತಿ ಹೆಚ್ಚಿಸಿರುವುದು ಜಿಲ್ಲೆಗೆ ಅನುಕೂಲವಾಗಲಿದೆ.

ಕ್ವಿಂಟಾಲ್​ ಕೊಬ್ಬರಿಗೆ 1,1160ರೂ. ಕೊಟ್ಟು 2,999 ಮೆಟ್ರಿಕ್​ ಟನ್​ ಮಿಲ್ಲಿಂಗ್​ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರದ ಅನುಮತಿ ಆಧರಿಸಿ ರಾಜ್ಯ ಸರ್ಕಾರ ದಕ್ಷಿಣ ಕನ್ನಡ, ಹಾಸನ, ಉಡುಪಿ ಜಿಲ್ಲೆಗಳಿಂದ ಮಾತ್ರ ಕೊಬ್ಬರಿ ಖರೀದಿಗೆ ಅನುಮತಿ ನೀಡಿ ನೀಡಿದ್ದ ಆದೇಶದಿಂದ ತುಮಕೂರು ಸೇರಿ ಇತರ ತೆಂಗು ಬೆಳೆಯುವ ಜಿಲ್ಲೆಗಳಿಗಾದ ಆನ್ಯಾಯದ ಬಗ್ಗೆ ವಿಜಯವಾಣಿ ಜು.6ರಂದು "ಮಿಲ್ಲಿಂಗ್​ ಕೊಬ್ಬರಿ ಖರೀದಿ ಜಿಲ್ಲೆಗೆ ಅನ್ಯಾಯ' ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ವಿಜಯವಾಣಿ ವರದಿ ಗಮನಿಸಿದ್ದ ರಾಜ್ಯ ಸರ್ಕಾರ ಜು.10ರಂದು ಕೇಂದ್ರ ಸರ್ಕಾರಕ್ಕೆ ಪತ್ರಬರೆದು ತುಮಕೂರು, ರಾಮನಗರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದಲೂ ಮಿಲ್ಲಿಂಗ್​ ಕೊಬ್ಬರಿ ಖರೀದಿಗೆ ಅನುಕೂಲವಾಗುವಂತೆ 2024ನೇ ಸಾಲಿನ ಖರೀದಿ ಮಿತಿಯನ್ನು 2999 ಮೆಟ್ರಿಕ್​ ಟನ್​ನಿಂದ 10000 ಮೆಟ್ರಕ್​ ಟನ್​ಗಳಿಗೆ ಏರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಈ ಬಗ್ಗೆ ತುಮಕೂರು ಸಂಸದರೂ ಆದ ಕೇಂದ್ರ ಸಚಿವ ವಿ.ಸೋಮಣ್ಣ ಕೂಡ ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್​ ಚೌವ್ಹಾಣ್​ ಅವರಿಗೆ ಪತ್ರ ಬರೆದು ಖರೀದಿ ಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿ ಪತ್ರಬರೆದಿದ್ದರು. ರಾಜ್ಯ ಸರ್ಕಾರದ ಶಿಾರಸು ಒಪ್ಪಿರುವ ಕೇಂದ್ರ ಸರ್ಕಾರ 10 ಸಾವಿರ ಮೆಟ್ರಿಕ್​ ಟನ್​ ಕೊಬ್ಬರಿ ಖರೀದಿಗೆ ಅನುಮತಿ ನೀಡಿದ್ದು ತೆಂಗು ಬೆಳೆಯುವ ಜಿಲ್ಲೆಗಳಿಗೆ ಕೊಂಚ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net