

ಮಹದೇವಪುರ: ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಹಿಂದುಳಿದ ಸಮಾಜಗಳ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕ್ಷೇತ್ರದ ಮಳ್ಳೂರಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಜೆಪಿ ನಗರ ಮಂಡಲದ ಎಸ್ಸಿ ಮೋರ್ಚಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಅನೇಕ ಯೋಜನೆಗಳನ್ನು ಪಲಾನುಭವಿಗಳಿಗೆ ತಲುಪಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕು. ಎಲ್ಲ ಬಡವರ ಏಳ್ಗೆಗಾಗಿ ಅವಿರತವಾಗಿ ಶ್ರಮಿಸಿದ್ದ ಅಂಬೇಡ್ಕರ್ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಮೋದಿ, ಮಧ್ಯಪ್ರದೇಶದಲ್ಲಿರುವ ಅಂಬೇಡ್ಕರ್ ಅವರ ಜನ್ಮಭೂಮಿ, ಲಂಡನ್ ಶಿಕ್ಷಾ ಭೂಮಿ, ನಾಗಪುರದ ದೀಕ್ಷಾ ಭೂಮಿ, ಮುಂಬೈನ ಚೈತ್ಯಾ ಭೂಮಿ ಮತ್ತು ದೆಹಲಿಯ ಮಹಾ ಪರಿನಿರ್ವಾಹಣದ ಸ್ಥಳವನ್ನು ಸೇರಿಸಿ ‘ಪಂಚತೀರ್ಥ’ ಎಂದು ಘೋಷಿಸಿದ್ದಾರೆ ಎಂದರು.
ನಗರ ಮಂಡಲದ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷ ಮನೋಹರ ರೆಡ್ಡಿ, ಬಿ.ಕೆ. ರಾಜಾರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಉಸ್ತುವಾರಿ ಗುಂಜೂರು ಚರಣ್, ನಗರ ಮಂಡಲ ಉಪಾಧ್ಯಕ್ಷ ಮಾರಪ್ಪ, ನಗರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಿನಾಥ್ ಪುಟ್ಟಪ್ಪ, ಕೋಶಾಧ್ಯಕ್ಷ ಸುರೇಶ್, ಬಾಬುರೆಡ್ಡಿ, ಸತೀಶ್ ರೆಡ್ಡಿ, ರಾಮಕೃಷ್ಣಪ್ಪ, ಸೋಮಶೇಖರ್ ಸೇರಿ ಮತ್ತಿತರರಿದ್ದರು.