ಗಣತಿ ಕಾರ್ಯಕ್ಕೆ ಒಂದು ಸಾವಿರ ಗಣತಿದಾರರು ಬೇಕು

6 DC-Cencess meeting 2 (1)
Published on

ಮೈಸೂರು: ಜಿಲ್ಲೆಯ 7ನೇ ಆರ್ಥಿಕ ಗಣತಿ ಪ್ರಾರಂಭವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಜಿಲ್ಲಾ ಆರ್ಥಿಕ ಗಣತಿ ಕೈಗೊಳ್ಳಲು ಸಿಎಸ್‌ಸಿ (ಸಾಮಾನ್ಯ ಸೇವಾ ಕೇಂದ್ರ)ಗೆ ವಹಿಸಲಾಗಿದ್ದು, ಈವರೆಗಿನ ಪ್ರಗತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಡಿಸಲಾಯಿತ.

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಕುಟುಂಬಗಳಿದ್ದು, ಈವರೆಗೆ 27,000 ಕುಟುಂಬಗಳು ಗಣತಿಗೆ ಒಳಪಟ್ಟಿರುತ್ತವೆ. ಗಣತಿ ಕಾರ್ಯಕ್ಕೆ 468 ಗಣತಿದಾರರನ್ನು ನೇಮಿಸಲಾಗಿದ್ದು, ಇದುವರೆಗೂ 84 ಗಣತಿದಾರರು ಮಾತ್ರ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಮರ್ಪಕವಾಗಿ ಗಣತಿ ಕೈಗೊಳ್ಳಲು ಒಂದು ಸಾವಿರ ಗಣತಿದಾರರ ಅವಶ್ಯಕತೆ ಇದೆ ಎಂದು ಡಿಸಿ ತಿಳಿಸಿದರು.

ಮೊದಲ ಹಂತದಲ್ಲಿ 350 ಜನ ಮೇಲ್ವಿಚಾರಕರನ್ನು ನೇಮಿಸಬೇಕಿದ್ದು, ಅದರಲ್ಲಿ 29 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಎಸ್‌ಸಿ ವಿರುದ್ಧ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಕಳೆದ ಎರಡು ತಿಂಗಳಿಂದ ದೂರಿನ ಸಂಖ್ಯೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಚ್ಚರವಹಿಸಿ ಕಟ್ಟುನಿಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ಕೃಷ್ಣಮೂರ್ತಿ, ಜಿಲ್ಲಾ ಸಾಂಖ್ಯಿಕ ಕಚೇರಿಯ ಸಹಾಯಕ ನಿರ್ದೇಶಕ ಎಂ.ಪ್ರಕಾಶ್, ಎಎಸ್‌ಒ ದಾಕ್ಷಾಯಿಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಜಿ.ರಾಜೇಂದ್ರ, ಡಿಡಿಪಿಐ ಡಾ.ಪಾಂಡುರಂಗ, ಸಿಎಸ್‌ಸಿ ಜಿಲ್ಲಾ ಗಣತಿದಾರರಾದ ಉಮಾಶಂಕರ್, ವಿನೋದ್ ರಾಜ್, ಮಾಂತೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net