ಸಂಭ್ರಮದ ಬನಹಟ್ಟಿ ಕಾಡಸಿದ್ಧೇಶ್ವರ ರಥೋತ್ಸವ

24 RBK RATHA
ಬನಹಟ್ಟಿಯಲ್ಲಿ ಮಂಗಳವಾರ ಸಂಜೆ ಶ್ರೀ ಕಾಡಸಿದ್ಧೇಶ್ವರ ರಥೋತ್ಸವವು ಸಂಭ್ರಮದಿಂದ ನಡೆಯಿತು.
Published on

ರಬಕವಿ/ಬನಹಟ್ಟಿ: ಇತಿಹಾಸ ಪ್ರಸಿದ್ಧವಾದ ಬನಹಟ್ಟಿ ಕಾಡಸಿದ್ಧೇಶ್ವರ ರಥೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 12 ರಿಂದಲೇ ತೇರಿಗೆ ಕಂಟಮಾಲಿ ಹಾರ ಹಾಕಿ ಭಕ್ತರು ಸಿಂಗರಿಸುತ್ತಿದ್ದರು.

ನಗರದ ಸಾವಿರಾರು ಭಕ್ತರು ರಥಕ್ಕೆ ವಿಶೇಷ ಪೂಜೆ, ಕಾಯಿ ಕರ್ಪೂರ ಬೆಳಗಿದರು. ನಂತರ ಸಂಜೆ 4 ರಿಂದಲೇ ನಗರದ ಮಂಗಳವಾರ ಪೇಟ್‌ನ ಪ್ರಮುಖ ರಸ್ತೆಮಧ್ಯದಲ್ಲಿ ಪಟಾಕಿ ಸಿಡಿಸುವುದು ಪ್ರಾರಂಭವಾಯಿತು. ಲಕ್ಷಾಂತರ ರೂ. ಮೌಲ್ಯದ ಪಟಾಕಿ ಸಿಡಿಸಿ ಸಾವಿರಾರು ಭಕ್ತರು ಭಕ್ತಿ ಸಮರ್ಪಿಸಿದರು.

ಹಳೇ ಅರುಣ ಚಿತ್ರಮಂದಿರದ ರಸ್ತೆಯಿಂದ ಕಾಡಸಿದ್ಧೇಶ್ವರರ ತೇರು ಭಕ್ತರ ಜಯಘೋಷಗಳೊಂದಿಗೆ ಎಳೆಯಲು ಪ್ರಾರಂಭಿಸಿ ಮಂಗಳವಾರ ಪೇಟೆಯ ಗಾಂಧಿ ವೃತ್ತ ಸಮೀಪ ತೆರಳಿ ಸಂಪನ್ನಗೊಂಡಿತು. ಭಕ್ತರು ಸಂಪ್ರದಾಯದಂತೆ ಅಲ್ಲಿಯೂ ಕಾಯಿ ಕರ್ಪೂರ ಅರ್ಪಿಸಿದರು. ಭಕ್ತರು ತಮ್ಮ ಬೇಡಿಕೆಗಳನ್ನು ದೇವರಿಗೆ ಅರ್ಪಿಸಿ ತಮ್ಮ ಇಷ್ಟಾರ್ಥಗಳು ಈಡೇರಿದರೆ ಪ್ರತಿ ವರ್ಷ 2 ಸಾವಿರ ರೂ. ಪಟಾಕಿ ಸಿಡಿಸುತ್ತೇನೆ ಎಂದು ಹರಕೆ ಹೊರುತ್ತಾರೆ. ಈ ಬಾರಿ ಪ್ರಸಕ್ತ ವರ್ಷ ಪಟಾಕಿ ಸಿಡಿಸುವುದು ಸ್ವಲ್ಪ ಕಡಿಮೆಯಾಗಿತ್ತು. ಇದಕ್ಕೆ ದರ ಏರಿಕೆಯ ಕಾರಣ ಎಂಬುದು ಕೆಲ ಭಕ್ತರ ಅಭಿಪ್ರಾಯ.

ಪಟಾಕಿ ಸಿಡಿಸುವುದು ಪ್ರಾರಂಭವಾಗಿದ್ದು ಹೇಗೆ?: ನೂರಾರು ವರ್ಷಗಳ ಹಿಂದೆ ಬನಹಟ್ಟಿಯ ಗುಡ್ಡದ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಆಗಿನ ಕಾಡಸಿದ್ಧೇಶ್ವರ ಶ್ರೀಗಳು ತಪಸ್ಸು ಮಾಡುತ್ತ ವಾಸವಾಗಿದ್ದರು. ಅಲ್ಲಿಗೆ ಭಕ್ತರು ಬರುವಾಗ ಹಾಗೂ ಶ್ರೀಗಳು ಹಳ್ಳಿಗಳಿಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಕಾಡು ಪ್ರಾಣಿಗಳು ಇರುತ್ತಿದ್ದವು. ಅವುಗಳನ್ನು ಹೆದರಿಸುವ ಉದ್ದೇಶದಿಂದ ಕೆಲವು ಸಿಡಿ ಮದ್ದುಗಳನ್ನು ಸಿಡಿಸಿ ಓಡಿಸುತ್ತಿದ್ದರು ಎಂಬುದು ಹಿರಿಯರು ಹೇಳುತ್ತಾರೆ. ಅದೇ ಕ್ರಮೇಣವಾಗಿ ಪಟಾಕಿ ಸಿಡಿಸುವ ಪದ್ಧತಿ ಜಾರಿಗೆ ಬಂದಿತು ಎಂದು ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net