

ಕಳಸ: ಮಲೆನಾಡಿನ ಮನೆಗಳಲ್ಲಿ ಶ್ರಾವಣ ಮಾಸದ ಧಾರ್ಮಿಕ ಆಚರಣೆಗಳು ವಿಭಿನ್ನವಾದುದು. ಚೂಡಿ ಪೂಜೆ, ನಾಗರ ಪಂಚಮಿ, ಉಪಾಕರ್ಮ, ಗೌರಿವ್ರತ ಹೀಗೆ ಹಬ್ಬಗಳನ್ನು ಆಚರಿಸಲಾಗುವುದು. ಇವೆಲ್ಲವೂ ಬಯಲು ಸೀಮೆಗಿಂತ ವಿಭಿನ್ನ ಎಂದು ತಾಲೂಕು ಕಸಾಪ ಅಧ್ಯಕ್ಷ ಅ.ರಾ.ಸತೀಶ್‌ಚಂದ್ರ ಹೇಳಿದರು.
ತಾಲೂಕು ಕಸಾಪದಿಂದ ಆಯೋಜಿಸಿದ್ದ ಸಾಹಿತ್ಯ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡಿನಲ್ಲಿ ಸಾಮೂಹಿಕ ಶ್ರಾವಣ ಆರಾಧನೆ, ಕಥಾ ಶ್ರಾವಣ ಕಡಿಮೆ. ಮಲೆನಾಡು ಭೌಗೋಳಿಕವಾಗಿ ವಿಸ್ತಾರವಾದುದು. ಜನಸಂಖ್ಯೆ ಕಡಿಮೆ. ಮಲೆನಾಡಿಗೂ ಬಯಲು ಸೀಮೆಗೂ ಹಬ್ಬದ ಆಚರಣೆಯಲ್ಲಿ ವತ್ಯಾಸವಿದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ ಮಾತನಾಡಿದರು. ಕಸಾಪ ಮೂಡಿಗೆರೆ ತಾಲೂಕು ಮಾಜಿ ಅಧ್ಯಕ್ಷ ಅ.ರಾ.ರಾಧಾಕೃಷ್ಣ, ಕಳಸ ಹೋಬಳಿ ಅಧ್ಯಕ್ಷ ಶೇಖರ್ ಶೆಟ್ಟಿ, ತಾಲೂಕು ಕಸಾಪ ಖಜಾಂಚಿ ಕಿರಣ್ ಶೆಟ್ಟಿ, ಕಳಸ ಗ್ರಾಪಂ ಮಾಜಿ ಅಧ್ಯಕ್ಷೆ ಸುಜಯಾ, ಮಹಿಳಾ ಘಟಕದ ಕಾರ್ಯದರ್ಶಿ ಸುಮನಾ ಜಯರಾಜ್ ಇದ್ದರು.