

ರಾಯಚೂರು: ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂ ಇಂದಿಗೂ ಅನಿಷ್ಠ ಜಾತಿ ಪದ್ಧತಿಯಿಂದ ಮುಕ್ತವಾಗಿಲ್ಲ. ಬಿಜೆಪಿ ಅಕಾರಕ್ಕೆ ಬಂದ ದಿನದಿಂದ ಜಾತಿ ತಾರತಮ್ಯ, ಜಾತಿ ಬೇಧವನ್ನು ವ್ಯವಸ್ಥಿತವಾಗಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿಮಾ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಎಂ.ರವಿ ಹೇಳಿದರು.
ಸ್ಥಳೀಯ ಹರಿಜನವಾಡದ ಸಮುದಾಯ ಭವನದಲ್ಲಿ ದಲಿತ ಹಕ್ಕುಗಳ ಸಮಿತಿಯಿಂದ ದಲಿತರ ಹಕ್ಕುಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆಸಲಾಗುತ್ತಿರುವ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿ, ಧರ್ಮದ ಹೆಸರಿನಲ್ಲಿ ಅಸ್ಪಶ್ಯತೆಯನ್ನು ಜೀವಂತವಾಗಿ ಇಡಲಾಗುತ್ತಿದೆ ಎಂದರು.
ದಲಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕನ್ನು ನಿರಾಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಸೇರಿ ದಲಿತರ ಸಾಮಾಜಿಕ, ರಾಜಕೀಯ ಸಮಾನತೆಗಾಗಿ ನ.16 ರಂದು ರಾಜ್ಯ ಸಮಾವೇಶ, ಡಿ.4ರಂದು ಅಖಿಲ ಭಾರತ ಸಮಾವೇಶ ಹಮ್ಮಿಕೊಂಡಿವೆ ಎಂದು ತಿಳಿಸಿದರು.
ಸಮಿತಿ ಜಿಲ್ಲಾ ಸಂಚಾಲಕಿ ಎಚ್.ಪದ್ಮಾ ಮಾತನಾಡಿ, ದೇಶದಲ್ಲಿ ಬಹುತೇಕ ದಲಿತರು ಕಡಿಮೆ ಆದಾಯದ ವೃತ್ತಿಗಳನ್ನು ಅವಲಂಬಿಸಿದ್ದು, ಬಹುತೇಕರಿಗೆ ಮನೆ ಮತ್ತು ನಿವೇಶನಗಳಿಲ್ಲ. ದಲಿತ ಮಹಿಳೆಯರಲ್ಲಿ ಆಹಾರದ ಕೊರತೆ ತೀವ್ರವಾಗಿದ್ದು, ಶೇ.59ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.
ಸಮಿತಿ ವಾರ್ಡ್ ಅಧ್ಯಕ್ಷ ಈಶ್ವರ ಅಧ್ಯಕ್ಷತೆ ವಹಿಸಿದ್ದು. ಕಾರ್ಯಕ್ರಮದಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ವೀರೇಶ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಕೆ.ಪಿ.ಅನಿಲಕುಮಾರ ಉಪಸ್ಥಿತರಿದ್ದರು.