

ಮೈಸೂರು: ಜಾತ್ಯತೀತ, ಸಮಾನತೆ ಸೃಷ್ಟಿ ಮಾಡಬೇಕಾದ ಕಾಲಘಟ್ಟದಲ್ಲೂ ಜಾತಿ ವ್ಯವಸ್ಥೆ ಆಚರಣೆ ಜೀವಂತವಾಗಿರುವುದು ವಿಷಾದದ ಸಂಗತಿ ಎಂದು ಕುವೆಂಪು ವಿವಿ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯಕ ಹೇಳಿದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವಿ.ಶ್ರೀನಿವಾಸಪ್ರಸಾದ್- ಬಹುತ್ವದ ಎಚ್ಚರ, ಸ್ಮರಣೆ ಮತ್ತು ಪ್ರಮಾಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿಯನ್ನು ಅಹಂಕಾರದ ನೆಲೆಗಟ್ಟಿನಲ್ಲಿ ಮೂಡಿಸಲಾಗುತ್ತಿದೆ. ವಾಹನ ಸೇರಿದಂತೆ ಇನ್ನಿತರ ಸ್ಥಳದಲ್ಲಿ ತಮ್ಮ ಜಾತಿಯನ್ನು ಪ್ರತಿಬಿಂಬಿಸಿಕೊಳ್ಳಲಾಗುತ್ತಿದೆ. ಇದರಿಂದ ಮರ್ಯಾದಾ ಹತ್ಯೆಯಂತಹ ಪ್ರಕರಣಗಳೂ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವಿ.ಶ್ರೀನಿವಾಸಪ್ರಸಾದ್ ಬಹುತ್ವದ ಎಚ್ಚರದಂತೆ ಇದ್ದರು. ದಲಿತರ, ಶೋಷಿತರ ಸ್ವಾಭಿಮಾನದ ಸಂಕೇತವಾಗಿದ್ದರು. ಯಾವುದೇ ಒಬ್ಬ ವ್ಯಕ್ತಿಯನ್ನು ಶಕ್ತಿಯಾಗಿ ಹೇಗೆ ರೂಪಿಸಬಹುದು ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು. ಸ್ವಾಭಿಮಾನಿದ ಪ್ರಶ್ನೆ ಎದುರಾದಾಗ ಸಿಡಿದು ನಿಲ್ಲುತ್ತಿದ್ದರು.
ಕೈಗೊಂಡ ನಿರ್ಧಾರದಿಂದ ಯಾವುದೇ ಸಂದರ್ಭದಲ್ಲೂ ಹಿಂದೆ ಸರಿಯುತ್ತಿರಲಿಲ್ಲ. ಎಲ್ಲ ವಿವಿಗಳಲ್ಲಿ ಅಂಬೇಡ್ಕರ್ ಅಧ್ಯಯನ ಪೀಠ ಹೇಗಿರಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ತೋರಿಸಿಕೊಟ್ಟರು. ವಿದ್ಯಾರ್ಥಿಗಳು ಒಂದು ಪ್ರಜ್ಞೆಯಾಗಿ ಬೆಳೆಯಬೇಕು. ವಿವಿಗಳಲ್ಲಿ ತಳ ಸಮುದಾಯದ ವಿದ್ಯಾರ್ಥಿಗಳು ಸ್ವಾಭಿಮಾನದಿಂದ ತಲೆ ಎತ್ತಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟರು. ಅನೇಕ ನಾಯಕರನ್ನು ಬೆಳೆಸಿದರು ಎಂದು ತಿಳಿಸಿದರು.
ಜೆಎಲ್‌ಆರ್ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಮಾತನಾಡಿ, ಸ್ವಾಭಿಮಾನಿ, ನೇರ ನುಡಿಯುಳ್ಳವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಮುಂಗೋಪ, ಸ್ವಾಭಿಮಾನ ಜಾಸ್ತಿ. ಇದು ಇಲ್ಲದಿದ್ದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತಲೂ ಉನ್ನತ ಸ್ಥಾನದಲ್ಲಿರುತ್ತಿದ್ದರು. ಯಾವ ಸಂದರ್ಭದಲ್ಲೂ ರಾಜಿಯಾಗದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಡಾ.ಪ್ರಶಾಂತ್ ನಾಯಕ ತಿಳಿಸಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಡುವೆ ಘರ್ಷಣೆ ಸಂಭವಿಸಿದರೆ, ನಾಯಕ ಸಮುದಾಯ ಮುಖಂಡನ್ನು ಕರೆದ ಮಾತುಕತೆ ಮಾಡಿ, ಪರಿಸ್ಥಿತಿ ತಿಳಿಗೊಳಿಸುವಂತೆ ಸಲಹೆ ನೀಡುತ್ತಿದ್ದರು. ಪರಿಶಿಷ್ಟ ಸಮುದಾಯದ ನಾಯಕರಿಗೂ ತಿಳಿವಳಿಕೆ ನೀಡುತ್ತಿದ್ದರು ಎಂದರು.
ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜು ಟಿ.ಕಾಟೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಹುಣಸೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಇನ್ನಿತರರಿದ್ದರು.