

ಜಮಖಂಡಿ: ಹಿಂದುಸ್ಥಾನವನ್ನು ಕಾಂಗ್ರೆಸ್‌ನವರು ಖಲಿಸ್ತಾನ, ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಹಿಂದುಗಳು ರೊಚ್ಚಿಗೇಳುವ ಮುನ್ನ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಟೀಕಿಸಿದರು.
ನಗರದ ಶಾಸಕರ ಸಾಕ್ಷಾತ್ಕಾರ ನಿವಾಸದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿಯಲ್ಲಿ ಮುಸ್ಲಿಮರ ಸಂಖ್ಯೆ ಅತ್ಯಧಿಕವಾಗಿ ತೊರಿಸಲಾಗಿದ್ದು, ಇದು ಸರಿಯಾದ ಮಾಹಿತಿ ಅಲ್ಲ. ಆದ್ದರಿಂದ ಮರುಜಾತಿಗಣತಿ ಮಾಡಬೇಕು ಎಂದರು.
ಕಳೆದ ಎರಡು ವರ್ಷದಲ್ಲಿ ಒಂದು ಲೀಟರ್ ಹಾಲಿಗೆ ಮೂರು ಬಾರಿ ಒಟ್ಟು 9ರೂ. ಹೆಚ್ಚಿಸಿದ್ದಾರೆ. ಪೆಟ್ರೋಲ್ ಬೆಲೆ 3ರೂ. ಡೀಸೆಲ್ ಬೆಲೆ 5ರೂ. ಹೆಚ್ಚಿಸಿದ್ದಾರೆ. ಸ್ಮಾರ್ಟ್ ಮೀಟರ್ ಬೆಲೆಯನ್ನು 950 ರಿಂದ 25 ಸಾವಿರ ರೂಗೆ ಹೆಚ್ಚಳ ಮಾಡಿದ್ದಾರೆ. ನೀರಾವರಿ ಪಂಪ್‌ಸೆಟ್ ಅಳವಡಿಕೆಗೆ 30 ಸಾವಿರದಿಂದ 3ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದಾರೆ. ಜತೆಗೆ ಕಸದ ಮೇಲೂ ತೆರಿಗೆ ಹಾಕಿ ಸರ್ಕಾರ ಲೂಟಿಗೆ ಇಳಿದಿದೆ ಎಂದು ಆರೋಪಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧ ನೀಡಿ ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವಿಗೆ ಸರ್ಕಾರ ನೇರ ಹೊಣೆಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ., ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಖರೀದಿಯಲ್ಲಿ 15,500 ಕೋಟಿ ರೂ., ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ.ಗಳಷ್ಟು ಹಗರಣವಾಗಿದೆ ಎಂದು ಶಾಸಕರು ಆರೋಪಿಸಿದರು.
5 ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ರೂ ಕೋಟಿ ಖರ್ಚಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವವಾಗಿ 78 ಸಾವಿರ ಕೋಟಿ ರೂ. ಖರ್ಚಾಗುತ್ತಿದ್ದು, ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಇಲ್ಲದಂತಾಗಿದೆ ಎಂದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ವಿರುದ್ಧ ಬಾಗಲಕೋಟೆ ನಗರದಲ್ಲಿ ಏ.17 ರಂದು ಬೆಳಗ್ಗೆ 9 ಗಂಟೆಗೆ ಜನಾಕ್ರೋಶ ಯಾತ್ರೆ ನಡೆಸಲಾಗುವುದು. ಯಾತ್ರೆಯಲ್ಲಿ 15ರಿಂದ 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಜಮಖಂಡಿಯಿಂದ 2 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ.ಉಪಾಧ್ಯೆ ಮಾತನಾಡಿದರು.
ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸಂಗು ದಳವಾಯಿ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಗಣೇಶ ಶಿರಗಣ್ಣವರ, ಪ್ರದೀಪ ನಂದೆಪ್ಪನವರ, ಶ್ರೀಧರ ಕಂಬಿ ಇದ್ದರು.