ರಾಜ್ಯದ ಜನಕ್ಕೆ ಖುಷಿ ತಂದ ಜಾತಿಗಣತಿ

byrati suresh
Published on

ಕೋಲಾರ: ಜಾತಿ ಗಣತಿ ವರದಿ ರಾಜ್ಯದ ಜನತೆಗೆ ಖುಷಿ ತಂದಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಮಾನ&ಮರ್ಯಾದೆ ಇಲ್ಲ ಎಂದು ಸಚಿವ ಬೈರತಿ ಸುರೇಶ್​ ಹರಿಹಾಯ್ದರು.

ನಗರದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್​ ಸರ್ಕಾರವು ಸಂವಿಧಾನದ ಪ್ರಕಾರವೇ ನಡೆಯುತ್ತಿದೆ. ಆದರೆ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದರು.

ಬಿಜೆಪಿಯವರು ಇಷ್ಟು ದಿನ ಕಳೆದರೂ ಕಾಂಗ್ರೆಸ್​ ವರದಿ ಜಾರಿಗೊಳಿಸುತ್ತಿಲ್ಲ ಎಂದು ಹೇಳುತ್ತಿದ್ದರು. ಈಗ ವರದಿ ಬಿಡುಗಡೆ ಮಾಡಿದ ತಕ್ಷಣ ಟೀಕೆ ಮಾಡುತ್ತಿದ್ದಾರೆ, ಇದರಲ್ಲಿ ಏನು ರಾಜಕೀಯ ಇದೆ ಎಂದು ಪ್ರಶ್ನಿಸಿದರು.

ವರದಿ ಪ್ರಕಾರ 76 ಲಕ್ಷ ಲಿಂಗಾಯತರು ಇದ್ದಾರೆ, ಎರಡನೇ ಸ್ಥಾನದಲ್ಲಿ ಮುಸ್ಲಿಮರು ಇದ್ದಾರೆ, ನಂತರ ಒಕ್ಕಲಿಗರು ಪ್ರಮುಖ ಸ್ಥಾನದಲ್ಲಿದ್ದಾರೆ. ಇದರಿಂದ ಯಾರಿಗೂ ಬೇಜಾರಿಲ್ಲ. ಹಾಗೆ ನೋಡೊದಿದ್ದರೆ ನನಗೇನೇ ಬೇಜಾರಿದೆ. ನಮ್ಮ ಸಮುದಾಯದವ ಅಂಕಿ ಅಂಶ ಹೆಚ್ಚಿರುತ್ತದೆ ಎಂದು ಭಾವಿಸಿದ್ದೆ, ಇಲ್ಲಿ ನೋಡಿದರೆ ತೀರಾ ಕಡಿಮೆ ಇದ್ದೇವೆ ಎಂದರು.

ಜಾತಿ ಗಣತಿ ಮಾಡಿರುವುದು ಶಾಲಾ ಶಿಕ್ಷಕರು, ಅವರೆಲ್ಲ ಒಂದೇ ಸಮುದಾಯದವರಲ್ಲ. ಜಾತಿ ಗಣತಿ ಸ್ವಾತಂತ್ರ$್ಯ ನಂತರ ಒಂದೇ ಬಾರಿ ಆಗಿದ್ದು, ಈಗ ಜಾತಿ ಗಣತಿ ಮಾಡಿರುವುದಕ್ಕೆ ಖುಷಿ ಪಡಬೇಕು, ಶೇ.95 ಮಂದಿಗೆ ಒಪ್ಪಿಗೆ ಇದೆ ಎಂದರು.

ಈಗಾಗಲೇ ಎಲ್ಲ ಸಚಿವರಿಗೂ ವರದಿ ಪುಸ್ತಕ ನೀಡಿದ್ದು, ಏ.17ರಂದು ಸಂಪುಟ ಸಭೆಯಲ್ಲಿ ಅಂಗೀಕಾರ ಸಿಗುವ ವಿಶ್ವಾಸವಿದೆ ಎಂದರು. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಆಗ ಬಿಜೆಪಿಯವರು ಈ ಯೋಜನೆಗಳು ಲೋಕಸಭೆ ಚುನಾವಣೆಗೆ ಸಿಮೀತವಾಗಿದ್ದು, ನಂತರ ರದ್ದು ಆಗುತ್ತದೆ ಎಂದು ಟೀಕಿಸಿದ್ದರು. ಆದರೆ, ಸೌಲಭ್ಯಗಳು ಈಗಲೂ ಮುಂದುವರಿದಿವೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಏಕೆ ಈ ಯೋಜನೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.

ರೈತರಿಗೆ ತೊಂದರೆಯಾಗಲು ಬಿಡಲ್ಲ

ರೈತರ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಅದೇ ರೀತಿ ಅರಣ್ಯ ಜಮೀನನ್ನೂ ಖಾಸಗಿಯವರು ತೆಗೆದುಕೊಳ್ಳಲು ಬಿಡುವುದಿಲ್ಲ. ನಾವು ರೈತರ ಪರವಾಗಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಬೈರತಿ ಸುರೇಶ್​ ತಿಳಿಸಿದರು.

ಸಚಿವರೊಂದಿಗೆ ಚರ್ಚಿಸಿ ಕ್ರಮ

ಡಿಸಿಸಿ ಬ್ಯಾಂಕ್​, ಒಕ್ಕೂಟದ ಚುನಾವಣೆಯ ಸಂಬಂಧ ನಡೆದ ಸಭೆಗೆ ಜಿಲ್ಲೆಯ ಜನಪ್ರತಿನಿಧಿಗಳು ಬಂದಿದ್ದರು, ಈ ವಿಚಾರದಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇಲ್ಲ, ಶಾಸಕರಾದ ನಾರಾಯಣಸ್ವಾಮಿ, ಕೆಜಿಎ್​ ರೂಪಕಲಾ ಸಹ ಬೇರೆ ಸಂದರ್ಭದಲ್ಲಿ ಬಂದು ಚರ್ಚಿಸಿದ್ದರು. ಕೋಮುಲ್​ನಲ್ಲಿ ಆಗಿರುವ ಹಗರಣ ಕುರಿತು ನಾರಾಯಣಸ್ವಾಮಿ ಮಾಡಿರುವ ಆರೋಪ ಕುರಿತು ದಾಖಲೆ ಪಡೆದು, ಸಚಿವ ರಾಜಣ್ಣ ಅವರೊಂದಿಗೆ ಚರ್ಚಿಸಿ ಕ್ರಮತೆಗೆದುಕೊಳ್ಳಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಲಕ್ಷ ಜನರ ಸೇರಿಸುವ ಗುರಿ

ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಲಾನುಭವಿಗಳ ಸಮಾವೇಶ ಮಾಡಬೇಕು ಎಂಬ ಯೋಚನೆ ಇದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು. ಕಳೆದ ಸಾಲಿನ ಸವಲತ್ತ್ತುಗಳನ್ನು ಕೆಲ ಅಧಿಕಾರಿಗಳು ಈಗಾಗಲೇ ಹಂಚಿಕೆ ಮಾಡಿದ್ದಾರೆ. ಈ ಸಾಲಿನ ಲಾನುಭವಿಗಳ ಪಟ್ಟಿ ತಯಾರಿಸಲು ಸೂಚಿಸಿದ್ದು, ದಿನಾಂಕ ನಿಗದಿ ಪಡಿಸಲಾಗುವುದು ಎಂದು ಬೈರತಿ ಸುರೇಶ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net