

ಮೈಸೂರು: ಮೈಸೂರಿನಲ್ಲಿ 9 ತಿಂಗಳ ಹಿಂದೆ ನಡೆದಿದ್ದ ಹನಿ ಟ್ರಾೃಪ್ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಹನಿ ಟ್ರ್ಯಾಪ್ ಮೂಲಕ ಕೇರಳ ಮೂಲದ ಉದ್ಯಮಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಯುವತಿ ಸೇರಿದಂತೆ ಮೂವರನ್ನು ಬಂಧಿಸಿರುವ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿತರಿಂದ 50 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ಮೂಲದ ಯುವತಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಜಲುಲ್ಲಾ ರೆಹಮಾನ್ ಮತ್ತು ರಿಜ್ವಾನ್ ಬಂಧಿತ ಆರೋಪಿಗಳು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇರಳದ ತಿರುನೆಲ್ಲಿಯ ಉದ್ಯಮಿ ಸುನ್ನಿ ಹನಿ ಟ್ರ್ಯಾಪ್‌ಗೆ ಒಳಗಾದವರು.
ಕಳೆದ ಮಾರ್ಚ್‌ನಲ್ಲಿ ಸುನ್ನಿ ಕೇರಳಕ್ಕೆ ತೆರಳುವಾಗ ಮಾನಂದವಾಡಿ ರಸ್ತೆಯಲ್ಲಿ ಇವರನ್ನು ಆರೋಪಿಗಳು ತಡೆಗಟ್ಟಿದ್ದಾರೆ. ಬಳಿಕ ಅಪರಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಯುವತಿಯೊಂದಿಗೆ ಅರೆ ನಗ್ನಫೋಟೋ ಮತ್ತು ವಿಡಿಯೋಗಳನ್ನು ತೆಗೆದಿದ್ದಾರೆ.
ಬಳಿಕ 10 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ನೀಡದೇ ಇದ್ದರೆ ಸಾಮಾಜಿಕ ಜಾಲ ತಾಣಕ್ಕೆ ಹಾಕಲಾಗುವುದು ಎಂದು ಬೆದರಿಸಿದ್ದಾರೆ. ಇದಕ್ಕೆ ಹೆದರಿದ ಸುನ್ನಿ 5 ಲಕ್ಷ ರೂ. ನೀಡಿದ್ದಾರೆ. ಅಲ್ಲದೇ ಖದೀಮರು ಆತನ ಬಳಿ ಇದ್ದ ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ಬಳಿಕ ಊರಿಗೆ ತೆರಳಿದ ಸುನ್ನಿ ತಿರುನೆಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹನಿಟ್ರ್ಯಾಪ್ ಸಂಬಂಧ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಮೈಸೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಇಲ್ಲಿಗೆ ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.