

ಶಿಗ್ಗಾಂವಿ(ಗ್ರಾ): ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ ಸೇರಿ 57 ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಒಪ್ಪುವಂಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಡಾ.ರಾಧಾಮೋಹನ ಅಗರವಾಲ ಹೇಳಿದರು.
ಶಿಗ್ಗಾಂವಿ ಪಟ್ಟಣದ ಬಸವರಾಜ ಬೊಮ್ಮಾಯಿ ಅವರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಗ್ಗಾಂವಿ ಉಪಚುನಾವಣೆಯ ಸಂಘಟನಾತ್ಮಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇಬ್ಬರು ಪ್ರಭಾವಶಾಲಿ ಸಂಸದರನ್ನು ಒಳಗೊಂಡಿರುವ ಶಿಗ್ಗಾಂವಿ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದೆ. ಇವರ ಉಪಸ್ಥಿತಿಯಲ್ಲಿ ಪಕ್ಷ ನಾಲ್ಕು ಬಾರಿ ಐತಿಹಾಸಿಕ ಗೆಲುವು ಸಾಧಿಸಿದೆ. ಟಿಕೆಟ್ ಆಕಾಂಕ್ಷಿಗಳು ಗುಂಪುಗಾರಿಕೆ ಮಾಡದೇ ವರಿಷ್ಠರು ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು. ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರುವ ಎಲ್ಲ 57 ಅಭ್ಯರ್ಥಿಗಳು ಕ್ಷೇತ್ರದ 57 ಶಕ್ತಿ ಕೇಂದ್ರಗಳನ್ನು ತಲಾ ಒಂದರಂತೆ ಗುರುತಿಸಿಕೊಂಡು ಆಯಾ ಶಕ್ತಿ ಕೇಂದ್ರಗಳಲ್ಲಿ ಕನಿಷ್ಠ 400 ಜನರಿಗೆ ಬಿಜೆಪಿ ಸದಸ್ಯತ್ವ ಕೊಡಿಸಬೇಕು. ಯಾರು ಎಷ್ಟು ಸದಸ್ಯರನ್ನು ಮಾಡುತ್ತಾರೋ ಅವರನ್ನು ಟಿಕೆಟ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಅಲ್ಪ ಮತಗಳ ಮುನ್ನಡೆ ಕಂಡಿರುವ ಕಾಂಗ್ರೆಸ್ ಉಪಚುನಾವಣೆ ಗೆದ್ದವರಂತೆ ವರ್ತಿಸುತ್ತಿದೆ. ಅವರಿಗೆ ಯಾಕೇ ಅಲ್ಪ ಮುನ್ನಡೆ ಸಿಕ್ಕಿದೆ ಎಂದು ಅವರಿಗೂ ಗೊತ್ತು, ನಮ್ಮ ಕಾರ್ಯಕರ್ತರಿಗೂ ಗೊತ್ತಿದೆ. ಆದರೆ, ಕಳೆದ ನಾಲ್ಕು ಬಾರಿ ಗೆದ್ದಂತೆ ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಮಾಜಿ ಶಾಸಕ ಪಿ.ರಾಜೀವ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷದ ಪದಾಧಿಕಾರಿಗಳು ಮೋದಿ ಅವರ ಜನ್ಮದಿನದಿಂದ ಅ. 2ರ ಗಾಂಧಿ ಜಯಂತಿವರೆಗೆ ಕ್ಷೇತ್ರದ 241 ಬೂತ್ಗಳಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸರ್ಕಾರಿ ಶಾಲೆ, ಆಸ್ಪತ್ರೆಗಳು ಮತ್ತು ಮಹಾನುಭಾವರ ಪ್ರತಿಮೆಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಶಾಸಕರು ಮತ್ತು ಹಾಲಿ ಶಾಸಕರಿಗೆ ಕ್ಷೇತ್ರದ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಲಾಯಿತು. ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಪಿ.ರಾಜೀವ, ಬಿ.ಸಿ. ಪಾಟೀಲ, ಶಂಕರ ಪಾಟೀಲ ಮನೇನಕೊಪ್ಪ, ಶಿವರಾಜ ಸಜ್ಜನ, ಡಾ.ಕೇಲಗಾರ, ಸೃಷ್ಠಿ ಪಾಟೀಲ, ವಿಶ್ವನಾಥ ಹರವಿ, ಟಿಕೆಟ್ ಆಕಾಂಕ್ಷಿಗಳಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಶಿವಾನಂದ ಮ್ಯಾಗೇರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.