ಈರುಳ್ಳಿ ರಾಶಿಗೆ ನುಗ್ಗಿದ ಕಾಲುವೆ ನೀರು

canal water seeped into the onion pile
Published on

ಮುಂಡರಗಿ: ಸಣ್ಣ ನೀರಾವರಿ ಇಲಾಖೆ ಕಾಲುವೆಯಲ್ಲಿ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಸಂಗ್ರಹದಿಂದಾಗಿ ಹರಿವಿಗೆ ಅಡ್ಡಿಯಾಗಿದ್ದರಿಂದ ನೀರು ರಸ್ತೆಯ ಮೇಲೆ ಹರಿದು ಈರುಳ್ಳಿ ರಾಶಿಗೆ ನುಗ್ಗಿದ ಘಟನೆ ತಾಲೂಕಿನ ಡಂಬಳ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ತೋಂಟದಾರ್ಯ ಮಠದ ಗದಗ-ಮುಂಡರಗಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಯಲು ಜಾಗದಲ್ಲಿ ಹಲವು ರೈತರು ಈರುಳ್ಳಿ ಬೆಳೆ ಕೊಯ್ಲು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧತೆ ಮಾಡುದ್ದರು. ಆದರೆ, ವಿಕ್ಟೋರಿಯಾ ಮಹಾರಾಣಿ ಕೆರೆಯ ನೀರು ಸಣ್ಣ ನೀರಾವರಿ ಇಲಾಖೆ ಕಾಲುವೆ ಮೂಲಕ ಹರಿಸಲಾಗುತ್ತಿತ್ತು. ಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದರಿಂದ ನೀರು ಅನಿರೀಕ್ಷಿತವಾಗಿ ರಸ್ತೆ ಮೇಲೆ ಹರಿದು ಈರುಳ್ಳಿ ರಾಶಿಗೆ ನುಗ್ಗಿ ಹಾನಿಯಾಗಿದೆ.

ಕಾಲುವೆ ನೀರು ನುಗ್ಗಿದ್ದರಿಂದ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಯಿತು ಎಂದು ರೈತರಾದ ಜಯಶ್ರೀ ಸೊರಟೂರ, ಶ್ರೀಕಾಂತ ಪ್ಯಾಟಿ ಅಳಲು ತೋಡಿಕೊಂಡರು.

ಪ್ರತಿ ಎಕರೆಗೆ 50ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು. ಕಟಾವು ಮಾಡಿ ಸ್ವಚ್ಛಗೊಳಿಸಿ ಒಣಗಿಸಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ದಿಢೀರನೆ ಈರುಳ್ಳಿ ರಾಶಿಗೆ ಕಾಲುವೆ ನೀರು ನುಗ್ಗಿದ್ದರಿಂದ ಬೆಳೆಗೆ ಹಾನಿಯಾಗಿದೆ. ಗ್ರಾಮದ ಕೆರೆ ಮತ್ತು ಕಾಲುವೆ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಕಾಲುವೆ ನಿರ್ವಹಣೆ ಮತ್ತು ದುರಸ್ತಿಗೆ ಆದ್ಯತೆ ನೀಡಬೇಕು ಗ್ರಾಮದ ರೈತರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net