22ರಿಂದ ಪ್ರಚಾರ ಅಭಿಮಾನ ಆರಂಭ

prathap simha
Published on

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜೂ.22 ರಿಂದ ಒಂದು ತಿಂಗಳ ಕಾಲ ಸರ್ಕಾರದ ಸಾಧನೆಗಳ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.


ಜೂ.22ರಂದು ಮೈಸೂರು ವಿಭಾಗದ ಕಾರ್ಯಕರ್ತರ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಲಜೀವನ್ ಮಿಷನ್, ದಶಪಥ ಹೆದ್ದಾರಿ ನಿರ್ಮಾಣ, ಮಂಡಕಳ್ಳಿ ವಿಮಾನ ನಿಲ್ದಾಣ, ರೈಲು ನಿಲ್ದಾಣದ ಅಭಿವೃದ್ಧಿ, ಸೂಯೇಜ್ ಫಾರ್ಮ್ ಕಸ ವಿಲೇವಾರಿಗೆ ಕ್ರಮ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಮೋದಿ ಅವರು ಮೈಸೂರಿಗೆ ಕೊಟ್ಟಿದ್ದಾರೆ. ಪೆರಿಫೆರಲ್ ರಸ್ತೆ ಕಾಮಗಾರಿ ಡಿಪಿಆರ್ ಆದ ನಂತರ ಕಾರ್ಯಾರಂಭವಾಗಲಿದೆ. ನಂಜನಗೂಡು 6 ಪಥದ ರಸ್ತೆ ನಿರ್ಮಾಣ ಮಾಡುತ್ತೇವೆ. ಗ್ರೇಟರ್ ಮೈಸೂರು ಮಾಡಿ ಮೋನೋ, ಮೆಟ್ರೋ ರೈಲು ತರುವ ಕೆಲಸ ಮಾಡುತ್ತೇವೆ. ಸರ್ಕಾರದ ಈ ಎಲ್ಲ ಜನಪರ ಯೋಜನೆಗಳ ಅರಿವು ಮೂಡಿಸುವ ಕೆಲಸವನ್ನು ಅಭಿಯಾನದಲ್ಲಿ ಮಾಡುತ್ತೇವೆ. ನಮ್ಮ ಸರ್ಕಾರ ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದೆ. ಸರ್ಕಾರದ ಅಭಿವೃದ್ಧಿ ನೋಡಿ 2024ರಲ್ಲೂ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರಿಕೆಟ್ ಮೈದಾನಕ್ಕೆ ಬದಲಿ ಜಾಗ

ಸಾತಗಳ್ಳಿ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 19 ಎಕರೆ ಜಾಗ ಗುರುತಿಸಲಾಗಿತ್ತು. ಆದರೆ ಮಧ್ಯದಲ್ಲೇ ಎರಡು ಎಕರೆ ಕೆರೆ ಬರುತ್ತಿದೆ. ಇದರಿಂದಾಗಿ ಅಲ್ಲಿ ಕ್ರೀಡಾಂಗಣ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಬೋಗಾದಿ ಬಳಿಯ ಹುಯಿಲಾಳುವಿನಲ್ಲಿ 26 ಎಕರೆ ಜಾಗ ಗುರುತಿಸಿದ್ದು, ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲಾಗುವುದು ಎಂದು ಪ್ರತಾಪ್ ಸಿಂಹ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಮಹೇಶ್‌ರಾಜೇ ಅರಸ್, ಗಿರಿಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net